ಪತಿಯ ಭೀಕರ ಕೊಲೆ ಪ್ರಕರಣ: ಆರೋಪಿ ಪತ್ನಿಯನ್ನು ಶಿಕ್ಷಿಸುವ ಬದಲು ನಿಮ್ಹಾನ್ಸ್‌ಗೆ ದಾಖಲಿಸಲು ನ್ಯಾಯಾಲಯದ ಆದೇಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022ರಲ್ಲಿ ನಡೆದಿದ್ದ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ತನ್ನ ಪತಿಯನ್ನೇ ಕೊಡಲಿಯಿಂದ ಕಡಿದು ಕೊಂದಿದ್ದ ಆರೋಪಿ ಪತ್ನಿ ಎಲಿಯಮ್ಮ ಎಂಬವರನ್ನು ಶಿಕ್ಷೆಗೆ ಗುರಿಪಡಿಸುವ ಬದಲಿಗೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ಸೇರಿಸುವಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2022ರ ಜೂನ್ ತಿಂಗಳಿನಲ್ಲಿ ನಾವೂರು ಗ್ರಾಮದ ನಿವಾಸಿ ಯೋಹಾನನ್ ಎಂಬವರನ್ನು ಅವರ ಪತ್ನಿ ಎಲಿಯಮ್ಮ ಕೊಡಲಿಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಎಲಿಯಮ್ಮಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು, ಘಟನೆಯ ಸಂದರ್ಭದಲ್ಲಿ ಎಲಿಯಮ್ಮ ಅವರ ಮಾನಸಿಕ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದರು. ವೈದ್ಯಕೀಯ ವರದಿಗಳು ಮತ್ತು ಸಾಕ್ಷ್ಯಧಾರಗಳ ಪ್ರಕಾರ, ಎಲಿಯಮ್ಮ ಅವರು ಕಳೆದ ಹಲವು ವರ್ಷಗಳಿಂದ ‘ಭ್ರಮಾಧೀನ ಕಾಯಿಲೆ’ಯಿಂದ (Delusional Disorder) ಬಳಲುತ್ತಿದ್ದರು ಎಂಬುದು ದೃಢಪಟ್ಟಿದೆ. ಈ ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ, ತಾನು ಮಾಡುತ್ತಿರುವ ಕೃತ್ಯವು ತಪ್ಪು ಅಥವಾ ಕಾನೂನುಬಾಹಿರ ಎಂಬ ಅರಿವು ಅವರಿಗಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 84ರ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯು ಅಪರಾಧದ ಸ್ವರೂಪವನ್ನು ಅರಿಯಲು ಅಸಮರ್ಥನಾಗಿದ್ದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲಿಯಮ್ಮಳನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿದ ನ್ಯಾಯಾಲಯವು, ಆಕೆಗೆ ಜೈಲು ಶಿಕ್ಷೆ ನೀಡುವ ಬದಲಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದೆ. ಆಕೆಯನ್ನು ತಕ್ಷಣವೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ, ಆಕೆಯ ಮಾನಸಿಕ ಆರೋಗ್ಯದ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























