ದೇಶಕ್ಕಾಗಿ ಏನು ಮಾಡಬಹುದಿತ್ತೋ ಅದನ್ನು ಮಾಡಿದ ತೃಪ್ತಿಯಿಂದ ನಿರ್ಗಮಿಸುತ್ತೇನೆ: ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ - Mahanayaka

ದೇಶಕ್ಕಾಗಿ ಏನು ಮಾಡಬಹುದಿತ್ತೋ ಅದನ್ನು ಮಾಡಿದ ತೃಪ್ತಿಯಿಂದ ನಿರ್ಗಮಿಸುತ್ತೇನೆ: ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ

chief justice b r gavai
21/11/2025

ನವದೆಹಲಿ: ನಾಲ್ಕು ದಶಕದ ಕಾನೂನು ವೃತ್ತಿಯ ಪಯಣದ ಕೊನೆಯಲ್ಲಿ ‘ಸಂಪೂರ್ಣ ತೃಪ್ತಿ ಮತ್ತು ಸಂತೃಪ್ತಿ’ಯೊಂದಿಗೆ ‘ಕಾನೂನು ವಿದ್ಯಾರ್ಥಿ’ಯಾಗಿ ನಿರ್ಗಮಿಸುತ್ತಿದ್ದೇನೆ’ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ(B.R.Gavai ) ಹೇಳಿದರು.

ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್‌ ಅವರನ್ನೊಳಗೊಂಡ ವಿಧ್ಯುಕ್ತವಾದ ಸಮಾರಂಭಿಕ ಪೀಠದಲ್ಲಿ ಅವರು ಭಾವುಕರಾಗಿ ಮಾತನಾಡಿದರು.

ಇದೇ ವರ್ಷದ ಮೇ 14ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಆರ್.ಗವಾಯಿ ಅವರು, ಆರು ತಿಂಗಳಿಗೂ ಹೆಚ್ಚು ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ನವೆಂಬರ್ 23ರಂದು ನಿವೃತ್ತಿಯಾಗಲಿದ್ದಾರೆ. ಶುಕ್ರವಾರ (ನ.20) ಅವರ ಕೊನೆಯ ಕಲಾಪದಲ್ಲಿ ನಾಲ್ಕು ದಶಕಗಳ ವೃತ್ತಿ ಬದುಕಿನ ದಿನಗಳನ್ನು ನೆನಪಿಸಿಕೊಂಡರು.

 ಈ ದೇಶಕ್ಕಾಗಿ ನಾನು ಏನು ಮಾಡಬಹುದಿತ್ತೋ, ಅದನ್ನು ಮಾಡಿರುವ ಸಂಪೂರ್ಣ ತೃಪ್ತಿಯ ಭಾವನೆಯೊಂದಿಗೆ ನಿರ್ಗಮಿಸುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ತುಂಬಾ ಧನ್ಯವಾದಗಳು ಎಂದು ಹೇಳಿದರು.


ಪ್ರತಿ ವಕೀಲರು, ನ್ಯಾಯಾಧೀಶರು ನಮ್ಮ ಸಂವಿಧಾನ ಪ್ರತಿಪಾದಿಸುವ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ತತ್ವಗಳಿಗೆ ಒಳಪಡುತ್ತಾರೆ ಎಂದು ನಾನು ನಂಬುತ್ತೇನೆ. ನಮ್ಮೆಲ್ಲರಿಗೂ ತುಂಬಾ ಪ್ರಿಯವಾದ ಸಂವಿಧಾನದ ಈ ನಾಲ್ಕು ಅಂಶಗಳ ವ್ಯಾಪ್ತಿಯೊಳಗೆ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ