ಕನ್ವೀನ್ಸ್ ಮಾಡಲು ಆಗದಿದ್ರೆ ಕನ್ಫ್ಯೂಸ್ ಮಾಡು: ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಡಿದ್ದೇ ಅದು: ಸಿ.ಟಿ.ರವಿ ಕಿಡಿ

ಚಿಕ್ಕಮಗಳೂರು : ಕನ್ವೀನ್ಸ್ ಮಾಡಲು ಆಗದಿದ್ರೆ ಕನ್ಫ್ಯೂಸ್ ಮಾಡು, ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ್ದು ಅದೇ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದರು.
ಮುಖ್ಯಮಂತ್ರಿಗಳೇ, ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ? 2004–2014ರವರೆಗೆ ಎಷ್ಟು ತೆರಿಗೆ ಹಣ ಬಂದು ಶ್ವೇತಪತ್ರ ಹೊರಡಿಸಿ, 2014–2024 ಫೆಬ್ರವರಿವರೆಗೆ ಮೋದಿ ಕೊಟ್ಟ ತೆರಿಗೆ ಹಣ ಎಷ್ಟು ಹೇಳಿ, ಇಬ್ಬರ ಅಡಳಿತಾವಧಿಯಲ್ಲಿ ಅನುದಾನ-ಸಹಾಯಧನ ಎಷ್ಟು ಶ್ವೇತಪತ್ರ ಹೊರಡಿಸಿ ಎಂದು ಅವರು ಒತ್ತಾಯಿಸಿದರು.
ದಾಖಲೆ ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ ಸಿ.ಟಿ.ರವಿ, 2004–2014ರವರಗೆ ಕೇಂದ್ರದಿಂದ ಬಂದ ತೆರಿಗೆ ಹಣ 81795 ಕೋಟಿ, 2014–2023 ಡಿಸೆಂಬರ್ ವರೆಗೆ ಮೋದಿ ಕೊಟ್ಟಿದ್ದು 282791 ಕೋಟಿ, 2004–2014ರವರೆಗೆ ಸಿಂಗ್ ಕೊಟ್ಟ ಅನುದಾನ-ಸಹಾಯಧನ 60779 ಕೋಟಿ, 2014–2023ರವರಗೆ ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು 28832 ಕೋಟಿ, ಮೋದಿ ಕರ್ನಾಟಕಕ್ಕೆ ಹತ್ರತ್ರ ಮೂರುವರೆ ಲಕ್ಷ ಕೋಟಿ ಹಣ ನೀಡಿದ್ದಾರೆ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯಯ್ಯ ಒಂದು ದಿನವೂ ಜಿಎಸ್ ಟಿ ಕೌನ್ಸಿಲ್ ಮೀಟಿಂಗ್ ಗೆ ಹೋಗಲಿಲ್ಲ, ನಾನೇಕೆ ಹೋಗಬೇಕು ಎಂಬ ಅಹಂಕಾರದಿಂದ ಒಂದು ದಿನವೂ ಮೀಟಿಂಗ್ಗೆ ಹೋಗಲಿಲ್ಲ, ಅನ್ಯಾಯವಾಗಿದ್ರೆ ಜಿಎಸ್ ಟಿ ಮೀಟಿಂಗ್ ನಲ್ಲಿ ಪ್ರಶ್ನೆ ಮಾಡಿ ನ್ಯಾಯ ಕೇಳಬಹುದಿತ್ತು ಎಂದರು.
ಕೃಷ್ಣಭೈರೇಗೌಡ ಕೇಂದ್ರ ನೀತಿ ಎಲ್ಲಾ ಸಮಾಧಾನವಾಗಿದೆ ಎಂದು ಹೇಳಿ ಬರ್ತಾರೆ, ಹೊರಗಡೆ ಬಂದು ಕೇಂದ್ರಕ್ಕೆ ಬೈಯುತ್ತಾ, ಸುಳ್ಳು ಹೇಳಿ ರಾಜಕಾರಣ ಮಾಡುತ್ತಾರೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.