ಬಿಜೆಪಿಯನ್ನು ಬೆಂಬಲಿಸದಿದ್ದರೆ ನರಕಕ್ಕೆ ಹೋಗುತ್ತೀರಿ: ಬಿಜೆಪಿ ಸಂಸದನ ಹೇಳಿಕೆ ವೈರಲ್

ಹೈದರಾಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸದವರು ‘ನರಕ’ಕ್ಕೆ ಹೋಗುತ್ತಾರೆ ಎಂದು ನಿಜಾಮಾಬಾದ್ ಸಂಸದ ಡಿ.ಅರವಿಂದ್ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಈ ಹೇಳಿಕೆ ನಗೆಪಾಟಲಿಗೀಡಾಗಿದೆ.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಂಸದ ಡಿ. ಅರವಿಂದ್, ಆಹಾರ ನೀಡುವ ಕೈಯನ್ನು ಕಚ್ಚಬೇಡಿ, ನೀವು ಸ್ವರ್ಗಕ್ಕೆ ಹೋಗುವುದಿಲ್ಲ, ಪ್ರಧಾನಿ ಮೋದಿ ತಂದಿರುವ ಯೋಜನೆಗಳ ಲಾಭ ಪಡೆದು ಬಿಜೆಪಿಯನ್ನು ಬೆಂಬಲಿಸದ ಜನರು ನರಕಕ್ಕೆ ಹೋಗುತ್ತಾರೆ ಎಂದಿದ್ದಾರೆ.
ನಿಮಗೆ ಉಚಿತ ಗ್ಯಾಸ್, ಉಚಿತ ಆಹಾರ, ಉತ್ತಮ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಮೋದಿ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ತ್ರಿವಳಿ ತಲಾಖ್ ರದ್ದುಗೊಳಿಸಿ ನಿಮ್ಮ ಆತ್ಮಗೌರವ ಖಾತ್ರಿಪಡಿಸಿದ್ದಾರೆ, ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ್ದಾರೆ ಎಂದು ಅರವಿಂದ್ ಹೇಳಿಕೆ ನೀಡಿದ್ದಾರೆ.
ಇನ್ನೂ ಬಿಜೆಪಿಗೆ ವೋಟು ಹಾಕದ ಹಿಂದೂಗಳು ದೇಶದ್ರೋಹಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾಸ್ಯದ ವಸ್ತುವಾಗಿ ಪರಿಣಮಿಸಿದೆ.