ಕ್ರೈಸ್ತ ಸನ್ಯಾಸಿನಿಯರ ಅಕ್ರಮ ಬಂಧನ, ಖಂಡನೀಯ: ಜಾನಿ ಕೆ.ಪಿ. - Mahanayaka
10:28 AM Sunday 28 - September 2025

ಕ್ರೈಸ್ತ ಸನ್ಯಾಸಿನಿಯರ ಅಕ್ರಮ ಬಂಧನ, ಖಂಡನೀಯ: ಜಾನಿ ಕೆ.ಪಿ.

johnny k p
01/08/2025

ಮಂಗಳೂರು: ಛತ್ತಿಸ್ ಗಡದಲ್ಲಿ ಕ್ರೈಸ್ತ ಸನ್ಯಾಸಿನಿಯರ ಅಕ್ರಮ ಬಂಧನ, ಕೇಂದ್ರದ ಬಿಜೆಪಿ ಸರಕಾರದ ಅಲ್ಪಸಂಖ್ಯಾತ ವಿರೋಧಿ ಧೋರಣೆಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರಾದ ಜಾನಿ ಕೆ.ಪಿ. ಘಟನೆಯನ್ನು ಖಂಡಿಸಿದ್ದಾರೆ.


Provided by

ಈ ಸಂಬಂಧ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು,  ಮಾತೆಯರಂತೆ ಪ್ರೀತಿಯನ್ನು ಹಂಚುತ್ತಾ ದೇಶ ಸೇವೆಗಾಗಿ ಮನೆ ಮಠವನ್ನು ತ್ಯಜಿಸಿ ತಮ್ಮ ಬದುಕನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟ ಕ್ರೈಸ್ತ ಸನ್ಯಾಸಿನಿಯರನ್ನು ಅಪ್ಪಟ ಸುಳ್ಳು ಆಪಾದನೆಯನ್ನು ಹೊರಿಸಿ ಕಳೆದ ಐದಾರು ದಿನಗಳಿಂದ ಜೈಲಿನಲ್ಲಿ ಬಂಧಿಸಿಟ್ಟಿರುವುದು ಖಂಡನೀಯ. ಈ ಕ್ರಮ ಭಾರತೀಯತೆಯ ಮೌಲ್ಯಗಳಿಗೆ ಕಳಂಕ ತರುವಂತದ್ದಾಗಿರುತ್ತದೆ. ಈ ಘಟನೆಯಿಂದಾಗಿ ಜಗತ್ತಿನೆದುರು ಭಾರತ ತಲೆತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಗುಂಪು ಅತ್ಯಾಚಾರದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದಾಗ ಅಂತಹವರಿಗೆ ಹಾರ ತುರಾಯಿಗಳೊಂದಿಗೆ ಸ್ವಾಗತ ಕೋರುವ ಕೆಲವು ಮನುಷ್ಯತ್ವರಹಿತ ಕೋಮುವಾದಿ ಸಂಘಟನೆಗಳು ಸುಳ್ಳು ಆಪಾದನೆಗಳನ್ನು ಮಾನ್ಯ ಮಾಡಿ, ಭಾರತದಲ್ಲಿ ಈವರೆಗೆ ಕೋಟ್ಯಾಂತರ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಆಸ್ಪತ್ರೆಗಳಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಚಿಕಿತ್ಸಾ ಸೇವೆ ನೀಡುತ್ತಿರುವ  ಕ್ರೈಸ್ತ ಸನ್ಯಾಸಿಗಳ ಮೇಲೆ ಉಗ್ರವಾದಿಗಳ ಮೇಲೆ ಬಳಸುವ ಎನ್ ಐಎಗೆ ಸಂಬಂಧಿಸಿದ ಅಕ್ರಮ ಮಾನವ ಸಾಗಾಟದ ಕಠಿಣ ಸೆಕ್ಷನ್ ಹೊರಿಸಿ ಬಡಪಾಯಿ ಕ್ರೈಸ್ತ ಭಗಿನಿಯರೊಂದಿಗೆ ಯಾವುದೋ ಘನಘೋರ ಅಪರಾಧ ಮಾಡಿದವರೊಂದಿಗೆ ವ್ಯವಹರಿಸುವಂತೆ ವ್ಯವಹರಿಸಿ ಜೈಲಿಗಟ್ಟಿದ್ದು ಅಕ್ಷಮ್ಯ. ಮಾತ್ರವಲ್ಲ ಏನೋ ದೊಡ್ಡ ಸಾಹಸ ಮಾಡಿದವರಂತೆ ಆಹ್ಲಾದ ವ್ಯಕ್ತಪಡಿಸುತ್ತಿರುವುದು  ದೇಶದ ಸೌಹಾರ್ದಯುತ ಬದುಕಿಗೆ ಕಳಂಕ ತರುವಂತದ್ದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಆಡಳಿತದ ಕರಾಳ ಕೋಮು ಮುಖವನ್ನು ಮತ್ತೊಮ್ಮೆ ತೆರೆದಿಟ್ಟಿದೆ. ಈ ಕೃತ್ಯವು ಸಂವಿಧಾನದತ್ತವಾಗಿ ಪ್ರಜೆಗಳಿಗೆ ನೀಡಲ್ಪಟ್ಟ ಸಂವಿಧಾನಬದ್ದ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಭಾರತೀಯ ಸಂವಿಧಾನವನ್ನು ಬಲಹೀನಗೊಳಿಸುತ್ತಿರುವುದರ ಲಕ್ಷಣವೂ ಹೌದು. ಕ್ರೈಸ್ತರ ಈ ದೇಶದೊಂದಿಗಿನ ಸಂಬಂಧ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು. ಒಂದು ವೇಳೆ ಕ್ರೈಸ್ತರ ಉದ್ದೇಶ ಒತ್ತಾಯದ ಮತಾಂತರವಾಗಿದ್ದಲ್ಲಿ ಇವತ್ತಿಗೆ ಈ ದೇಶದಲ್ಲಿ ಇರಬೇಕಾದ ಕ್ರೈಸ್ತರ ಸಂಖ್ಯೆ ಕೇವಲ 2.30 ಶೇಕಡಾ ಆಗಿರುತ್ತಿತ್ತೇ ? ಆರೋಪಗಳನ್ನು ಹೊರಿಸುವಾಗ ಅದು ಕನಿಷ್ಟ ನಂಬಿಕೆಗೆ ಅರ್ಹವಾಗಿರಬೇಕೆನ್ನುವ ಸಾಮಾನ್ಯ ಜ್ಞಾನವೂ ಇವರಿಗೆ ಇದ್ದಂತಿಲ್ಲ ಎಂದು ಜಾನಿ.ಕೆ.ಪಿ ಪತ್ರಿಕಾ ಹೇಳಿಕೆ ಮೂಲಕ ಖಂಡನೆ ವ್ಯಕ್ತಪಡಿಸಿರುತ್ತಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ