ಇನಾಮದಾರ ಸಕ್ಕರೆ ಕಾರ್ಖಾನೆ ಸ್ಫೋಟ ದುರಂತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಬಲಿಯಾದವರದ್ದು ಕಣ್ಣೀರಿನ ಕಥೆ!
ಬೆಳಗಾವಿ: ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಸಮೀಪವಿರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಗಾಯಗೊಂಡಿದ್ದ ಎಲ್ಲ ಎಂಟು ಕಾರ್ಮಿಕರು ಈಗ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಗೋಕಾಕ ತಾಲೂಕಿನ ರಾಘವೇಂದ್ರ ಮಲ್ಲಪ್ಪ ಗಿರಿಯಾಳ (36) ಎಂಬುವವರು ಮೃತಪಟ್ಟ ಬೆನ್ನಲ್ಲೇ, ಈ ದುರಂತದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ ಎಂಟಕ್ಕೇರಿದೆ.
ಹಲವು ಕನಸುಗಳು ಭಸ್ಮ: ಮೃತಪಟ್ಟ ಎಂಟೂ ಕಾರ್ಮಿಕರ ಜೀವನದ ಕಥೆಗಳು ಅತ್ಯಂತ ಮನಕಲಕುವಂತಿವೆ. ಇವರಲ್ಲಿ ಬಹುತೇಕರು ಕುಟುಂಬದ ಆಧಾರಸ್ತಂಭಗಳಾಗಿದ್ದರು. ಅಥಣಿ ತಾಲೂಕಿನ ಮಂಜುನಾಥ ತೇರದಾಳ ಎಂಬ ಯುವಕ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಹೆರಿಗೆಯಾಗಬೇಕಿದೆ. ಮಗುವಿನ ಮುಖ ನೋಡುವ ಮೊದಲೇ ಮಂಜುನಾಥ ವಿಧಿವಶರಾಗಿರುವುದು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಮದುವೆ ಕನಸು ಕಂಡಿದ್ದ ಯುವಕ: ಅರವಳ್ಳಿ ಗ್ರಾಮದ 28 ವರ್ಷದ ಮಂಜುನಾಥ ಕಾಜಗಾರ್ ಐಟಿಐ ಮುಗಿಸಿ ಹೆಲ್ಪರ್ ಆಗಿ ಸೇರಿದ್ದರು. “ಮನೆ ಕಟ್ಟಿ ಮದುವೆಯಾಗುತ್ತೇನೆ” ಎಂದು ಮಾವನಿಗೆ ಹೇಳುತ್ತಿದ್ದ ಯುವಕ ಈಗ ಹೆಣವಾಗಿ ಮನೆಗೆ ಮರಳಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿದ ತಂದೆ–ತಾಯಿ ಶವಾಗಾರದ ಮುಂದೆ ತಲೆ ಚಚ್ಚಿಕೊಂಡು ಅಳುತ್ತಿರುವ ದೃಶ್ಯ ಎಂತವರ ಕರುಳನ್ನು ಹಿಂಡುವಂತಿತ್ತು.
ಮಗನಿಗೆ ಹೆಣ್ಣು ಹುಡುಕುತ್ತಿದ್ದ ತಂದೆ: ಮೃತ ಭರತ್ ಸಾರವಾಡಿ ಎಂಬುವವರ ತಂದೆ ಬಸಪ್ಪ, ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು.
ಆಕ್ರೋಶ: ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಇಂತಹ ಅಪಘಾತಗಳಿಗೆ ಕಾರಣ ಎಂದು ಮೃತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. “ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿರುವ ಅವರು, ಮೃತ ಕುಟುಂಬಗಳಿಗೆ ತಕ್ಷಣ ದೊಡ್ಡ ಮೊತ್ತದ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಷ್ಟು ದೊಡ್ಡ ದುರಂತ ನಡೆದರೂ ಕಾರ್ಖಾನೆಯ ಮಾಲೀಕರು ಸಾಂತ್ವನ ಹೇಳಲು ಬಂದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























