ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆ: ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್

ಮಂಗಳೂರು: ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಡಿವೈಎಫ್ ಐ 12ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಮಹಾತ್ಮ ಗಾಂಧಿ ಹುತಾತ್ಮ ದಿನದ ನೆನಪಿನಲ್ಲಿ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ. ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ ಏಕೆಂದರೆ ಅವರು ಒಂದೇ ಒಂದು ಗುಂಡು ಹಾರಿಸದೆ ಸ್ವಾತಂತ್ರ್ಯವನ್ನು ತಂದರು ಎಂದು ಅವರು ಹೇಳಿದರು.
ಭಾರತದಲ್ಲಿರುವ ಸಾವಿರಾರು ಭಾಷೆ, ಜಾತಿಗಳನ್ನು ಒಂದಾಗಿ ಕೊಂಡೊಯ್ಯಬೇಕಾದರೆ ಯಾವುದಾದರೂ ಒಂದು ದೊಡ್ಡ ತತ್ವ ಅಥವಾ ಸಿದ್ಧಾಂತ ಬೇಕು. ಅದನ್ನೇ ಮಹಾತ್ಮಾ ಗಾಂಧಿಯವರು ಸರ್ವಧರ್ಮ ಸಮಭಾವ ಎಂದು ಕರೆದರು. ಆ ಸಿದ್ಧಾಂತಕ್ಕೋಸ್ಕರ ಪ್ರಾಣವನ್ನು ಬಿಟ್ಟರು ಎಂದರು.
ಮಂಡ್ಯದ ಕೆರೆಗೋಡು ಎಂಬಲ್ಲಿ ಬಿಜೆಪಿ ರಾಷ್ಟ್ರಧ್ವಜದ ಜಾಗದಲ್ಲಿ ಭಗವಾ ಧ್ವಜಾರೋಹಣ ಮಾಡುವ ಮೂಲಕ ಶಾಂತಿ ಕದಡುತ್ತಿದೆ ಎಂದು ಆರೋಪಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.