ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಅವಮಾನ, ಸಂವಿಧಾನದ ಮೇಲಿನ ದಾಳಿ: ದಿನೇಶ್ ಮೂಳೂರು - Mahanayaka

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಅವಮಾನ, ಸಂವಿಧಾನದ ಮೇಲಿನ ದಾಳಿ: ದಿನೇಶ್ ಮೂಳೂರು

dinesh muluru
07/10/2025

ಮಂಗಳೂರು: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿರುವ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿ ಅವಮಾನ ಮಾಡಿರುವ ಘಟನೆಯನ್ನು  ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗವು ತೀವ್ರವಾಗಿ ಖಂಡಿಸಿದೆ.


Provided by

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ದಕ್ಷಿಣ ಕನ್ನಡ ಜಿಲ್ಲಾ  ಅಧ್ಯಕ್ಷರಾದ  ದಿನೇಶ್ ಮೂಳೂರು,  ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಲಕ್ಷಗಟ್ಟಲೆ ಪುಸ್ತಕಗಳನ್ನು ಓದಿ, ನೂರಕ್ಕೂ ಅಧಿಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಎರಡು ಸಾವಿರಕ್ಕೂ ಅಧಿಕವಾದ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ಪ್ರಪಂಚದಲ್ಲಿ ಅತೀ ದೊಡ್ಡ  ಲಿಖಿತ  ಸಂವಿಧಾನವನ್ನು ಈ  ದೇಶಕ್ಕೆ ಅರ್ಪಣೆ ಮಾಡಿದ್ದಾರೆ.  ಇಂಥಹ ಭವ್ಯವಾದ ಸಂವಿಧಾನದಿಂದ ಆಯ್ಕೆಯಾದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳನ್ನು ಅವಮಾನ ಮಾಡುವುದೆಂದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಈ ಕಿಡಿಗೇಡಿ ವಕೀಲನನ್ನು ಬಂಧಿಸುವುದು ಮಾತ್ರ ಅಲ್ಲ, ಆತನನ್ನು ದೇಶದ್ರೋಹದ ಕೇಸ್ ದಾಖಲಿಸಬೇಕೆಂದು ಆಗ್ರಹಪಡಿಸುತ್ತೇವೆ ಎಂದರು.

ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆಯು ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ ಎಂದರು.

ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯಾತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ ಎನ್ನುವುದನ್ನು ಅವರ ಗಮನಕ್ಕೆ ತರಬಯಸುತ್ತೇವೆ. ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ ನಲ್ಲಿ ಇಂದು ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದು ತಿಳಿಸಿದರು.

ಮನುವಾದಿಗಳು ಸ್ವತಂತ್ರ ಪೂರ್ವದಿಂದಲೂ  ಇಂದಿನವರೆಗೂ  ದಲಿತರನ್ನು ಎಲ್ಲಾ ರಂಗದಲ್ಲೂ ಎಲ್ಲಾ ಕ್ಷೇತ್ರದಲ್ಲೂ  ಶೋಷಣೆ ಮತ್ತು ದೌರ್ಜನ್ಯ, ಸಾಮಾಜಿಕವಾಗಿ ಬಹಿಷ್ಕಾರ ಹಾಕುತ್ತಾ  ದಲಿತರನ್ನು ಕಡೆಗಣಿಸುತ್ತಾ ಬಂದಿದ್ದಾರೆ.   ಈಗಲೂ ಸಹ  ಪ್ರಜ್ಞಾವಂತರಾಗುತ್ತಿರುವ ಸಮಾಜದಲ್ಲಿ  ಸಾಕಷ್ಟು ರೀತಿಯಲ್ಲಿ ನಮ್ಮ ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬದಲಾವಣೆಗಳಾಗುತ್ತಿದ್ದರು ಒಂದಲ್ಲ ಒಂದು ರೀತಿಯಲ್ಲಿ  ದಲಿತರನ್ನು  ಅತ್ಯಂತ ಹೀನಾಯ ಸ್ಥಿತಿಯ ರೀತಿಯಲ್ಲಿ  ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾ ಸನಾತನ ಧರ್ಮೀಯ ಆಚಾರ  ವಿಚಾರಗಳಿಂದ  ಶೋಷಣೆ ಮಾಡುತ್ತಲೇ ಬಂದಿದ್ದಾರೆ. ಇಂತಹ ಸನಾತನ ಧರ್ಮೀಯ  ಕಟ್ಟುಪಾಡುಗಳಿಗೆ ಒಳಗಾಗದಂತೆ  ಶೋಷಣೆ, ದೌರ್ಜನ್ಯಗಳಿಗೆ  ಎದುರಿಸಿ ಮೆಟ್ಟಿ ನಿಲ್ಲುವಂತೆ  ದಲಿತರು  ಪ್ರಜ್ಞಾವಂತರಾಗಬೇಕು ಮತ್ತು ಬಲಾಢ್ಯವಾಗಬೇಕಾಗಿದೆ. ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ವಕೀಲರಾದ  ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ  ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಮತ್ತು ಇಂಥ ನಿಕೃಷ್ಟ ಮನೋಭಾವನೆಯನ್ನು ಹೊಂದಿರುವ ಇವರನ್ನು ಬಾರ್ ಕೌನ್ಸಿಲಿಂಗ್ ಅಸೋಸಿಯೇಷ ನ್ ನಿಂದ ವಕೀಲ ವೃತ್ತಿಯನ್ನು ರದ್ದುಪಡಿಸುವುದು ಮಾತ್ರ ಅಲ್ಲ, ಭಯೋತ್ಪಾದನೆ ಹಾಗೂ ದೇಶ ದ್ರೋಹದ ಕೇಸು ದಾಖಲಿಸುವ ಮೂಲಕ ಮನುವಾದಿ ಮನಸ್ಥಿತಿಯವರಿಗೆ  ನಮ್ಮ ಸಂವಿಧಾನದ ಮೂಲಕ ಬುದ್ದಿ ಕಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ