ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಅವಮಾನ: ಮಂಗಳೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಗಳೂರು: ಕೋರ್ಟ್ ಕಲಾಪದ ವೇಳೆಯೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿರುವ ಹಿರಿಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹ ಮತ್ತು ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ದ. ಕ. ಜಿಲ್ಲಾ ಸಮಿತಿಯು ಆಗ್ರಹಿಸಿತು. ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಗುರುವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ವಕೀಲ ರಾಜೇಶ್ ಕಿಶೋರ್ ಅವರ ಕೃತ್ಯವನ್ನು ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ., “ರಾಕೇಶ್ ಕಿಶೋರ್ ಶೂ ಎಸೆದಿರುವುದು ಕೇವಲ ಬಿ.ಆರ್.ಗವಾಯಿ ಅವರ ಮೇಲೆ ಮಾತ್ರವಲ್ಲ, ಸರ್ವರಿಗೆ ಸಮಪಾಲು ಸಮಬಾಳು ಸಂವಿಧಾನ ನೀಡಿರುವ ಹಿನ್ನೆಲೆ ಬಿ.ಆರ್.ಗವಾಯಿ ನ್ಯಾಯಮೂರ್ತಿಗಳಾಗಿದ್ದಾರೆ. ಅದನ್ನು ಸಹಿಸಲಾಗದ ಮಾನವ ವಿರೋಧಿ, ದೇಶದ್ರೋಹಿ ವಕೀಲ ರಾಕೇಶ್ ಕಿಶೋರ್, ಸಂವಿಧಾನದ ವಿರುದ್ಧ ಮನಸ್ಥಿತಿ ಇರುವುದನ್ನು ಶೂ ಎಸೆಯುವ ಮೂಲಕ ತೋರಿಸಿದ್ದಾರೆ. ರಾಕೇಶ್ ಕಿಶೋರ್ ತಾನು ಸನಾತನವಾದಿ ಅಂತ ಹೇಳುತ್ತಿದ್ದಾರೆ, ಸನಾತನ ಎನ್ನುವುದು ಬುದ್ಧಿಸಂ ನಿಂದ ಬಂದ ಪದ, ಆ ಪದವನ್ನು ಹೈಜಾಕ್ ಮಾಡಿ ಹಿಂದುತ್ವವಾದಿಗಳು ಈ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಹಿಂದುತ್ವವಾದಿಗಳು ಹೇಳುತ್ತಿರುವ ಸನಾತನವಾದ, ತೆಂಗಿನ ಗೆರಟೆಯಲ್ಲಿ ನೀರು, ಚಾ ಕೊಡುವುದು, ಮನೆಯ ಅಂಗಳದಿಂದ ಹೊರ ನಿಲ್ಲಿಸಿ ಊಟ, ತಿಂಡಿ ಕೊಡುವ ಸಂಸ್ಕೃತಿ(ಅಸ್ಪೃಶ್ಯತೆ). ಇದರ ಮತ್ತೊಂದು ಮುಖವೇ ಹಿಂದುತ್ವವಾದ. ಆದ್ರೆ ಇವರಿಗೆ ನಮ್ಮ ದೇಶದ ಸಂವಿಧಾನ ಅಡ್ಡಿಯಾಗಿದೆ, ಹೀಗಾಗಿ ಬೇರೆ ಬೇರೆ ರೀತಿಯಲ್ಲಿ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದರು.
ಮಂಗಳೂರು ಸಾಮರಸ್ಯ ವೇದಿಕೆಯ ಅಧ್ಯಕ್ಷೆ ಮಂಜುಳಾ ನಾಯಕ್ ಮಾತನಾಡಿ, ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಬದಲು ಒಬ್ಬ ಮುಸಲ್ಮಾನನೋ, ಕ್ರೈಸ್ತನೋ ಆಗಿದ್ದರೆ, ಅತಲ ಸುತಲ ಪಾತಾಳದಲ್ಲಿರುವ ಎಲ್ಲ ಸಂಘಪರಿವಾರಗಳು ಎದ್ದುಕೊಂಡು ಬೀದಿಗೆ ಬಂದು ಹೋರಾಟ ಮಾಡುತ್ತಿತ್ತು, ಆದರೆ ಈಗ ಯಾರೂ ಮಾತನಾಡುತ್ತಿಲ್ಲ, ಯಾಕೆಂದ್ರೆ ಇಲ್ಲಿ ದಲಿತರಿಗೆ ಅವಮಾನ ಮಾಡಿರುವುದು ಹಾಗಾಗಿ ಯಾರೂ ಮಾತನಾಡುತ್ತಿಲ್ಲ ಎಂದರಲ್ಲದೇ ಆರ್.ಬಿ.ಗವಾಯಿ ಅವರಿಗೆ ಅವಮಾನಿಸಿದ ವಕೀಲನನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಎಕ್ಕಾರ್ ಮಾತನಾಡಿ, ಇಲ್ಲಿ ಹೆಸರಿಗಷ್ಟೇ ರಾಕೇಶ್ ಕಿಶೋರ್, ಸೈದ್ಧಾಂತಿಕವಾಗಿ ನೋಡುವುದಾದರೆ ಇದು ಭೀಮವಾದ VS ಮನುವಾದದ ನಡುವೆ ಇರುವ ಒಂದು ಸಂಘರ್ಷ, ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆ ನಡೆದಾಗ ಬಹಳ ತಡವಾಗಿ ಕಾಟಾಚಾರಕ್ಕೆ ಪ್ರತಿಕ್ರಿಯೆ ನೀಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕರಾದ ಸುಭಾಷ್ ಕಾನಡೆ ಮಾತನಾಡಿ, ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯ ಮೂರ್ತಿ ಆರ್.ಬಿ.ಗವಾಯಿ ಅವರಿಗೆ ಅವಮಾನ ಮಾಡಬೇಕು ಎಂದು ಯಾರದ್ದೋ ಕುಮ್ಮಕ್ಕಿಗೆ ಒಳಗಾಗಿ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿದ್ದಾರೆ. ಇದರ ಹಿಂದೆ ಜಾತಿ, ಅಸ್ಪೃಶ್ಯತೆಯ ಮನೋಸ್ಥಿತಿ ಇದೆ, ಇಂತಹ ಕುಕೃತ್ಯವನ್ನು ಮಾಡಿದ ವಕೀಲನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಸುಂದರ್ ಮೇರ, ದಿನೇಶ್ ಮೂಳೂರು ಮುಂತಾದವರು ಮಾತನಾಡಿದರು. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಕಮಲಾಕ್ಷ ಬಜಾಲ್, ರವಿ ಪಡ್ಪು, ಸಂಕಪ್ಪ ಕಾಂಚನ್, ಗಂಗಾಧರ ಜೋಕಟ್ಟೆ, ಅಣ್ಣು ಸಾಧನ ಬೆಳ್ತಂಗಡಿ ಉಪಸ್ಥಿತರಿದ್ದರು. ಕೃಷ್ಣ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD