ಎಲ್ ಪಿಜಿ ಸಿಕ್ತಿಲ್ವಾ? ನಿಮ್ಮ ಆಟೋಗಳನ್ನು ಪೆಟ್ರೋಲ್ ಗೆ ಬದಲಿಸಿಕೊಳ್ಳಿ: ಆಟೋ ಚಾಲಕರಿಗೆ ಘನಂದಾರಿ ಐಡಿಯಾ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - Mahanayaka

ಎಲ್ ಪಿಜಿ ಸಿಕ್ತಿಲ್ವಾ? ನಿಮ್ಮ ಆಟೋಗಳನ್ನು ಪೆಟ್ರೋಲ್ ಗೆ ಬದಲಿಸಿಕೊಳ್ಳಿ: ಆಟೋ ಚಾಲಕರಿಗೆ ಘನಂದಾರಿ ಐಡಿಯಾ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

prahlad joshi
07/04/2026

ದಾವಣಗೆರೆ: ದೇಶದಲ್ಲಿ ಪ್ರಸ್ತುತ ತಲೆದೂರಿರುವ ಆಟೋ ಎಲ್‌ ಪಿಜಿ (Auto LPG) ಕೊರತೆಯ ಹಿನ್ನೆಲೆಯಲ್ಲಿ, ಆಟೋ ಚಾಲಕರು ತಾತ್ಕಾಲಿಕವಾಗಿ ಎಲ್‌ ಪಿಜಿ ಬದಲಿಗೆ ಪೆಟ್ರೋಲ್‌ ಬಳಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಯಾವಾಗಲೂ ಸುಲಭವಾಗಿ ಲಭ್ಯವಿರುತ್ತದೆ. ಆದರೆ ಆಟೋ ಎಲ್‌ ಪಿಜಿ ವಿಶ್ವದ ಕೆಲವೇ ದೇಶಗಳಲ್ಲಿ ಮಾತ್ರ ಸಿಗುವಂತಹ ಸೀಮಿತ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಒಟ್ಟು 372 ಆಟೋ ಎಲ್‌ ಪಿಜಿ ವಿತರಣಾ ಕೇಂದ್ರಗಳಿದ್ದು, ಅದರಲ್ಲಿ ಸರ್ಕಾರ ಕೇವಲ 72 ಕೇಂದ್ರಗಳನ್ನು ನಡೆಸುತ್ತಿದೆ. ಉಳಿದ 300 ಕೇಂದ್ರಗಳು ಖಾಸಗಿ ಕಂಪನಿಗಳ ಒಡೆತನದಲ್ಲಿವೆ ಎಂದರು.

ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿರುವುದರಿಂದ ಖಾಸಗಿ ಕಂಪನಿಗಳು ಎಲ್‌ ಪಿಜಿ ಬೆಲೆಯನ್ನು ಪ್ರತಿ ಕೆಜಿಗೆ 110 ರೂಪಾಯಿವರೆಗೆ ಹೆಚ್ಚಿಸಿವೆ. ಆದರೆ ಸರ್ಕಾರಿ ಕೇಂದ್ರಗಳಲ್ಲಿ ಬೆಲೆ ಏರಿಕೆ ಮಾಡದ ಕಾರಣ ಪ್ರತಿ ಕೆಜಿಗೆ ಸುಮಾರು 89 ರೂಪಾಯಿ ಇದೆ. ಇದರಿಂದಾಗಿ ಸರ್ಕಾರಿ ಕೇಂದ್ರಗಳಲ್ಲಿ ಹೆಚ್ಚಿನ ವಾಹನಗಳು ಸಾಲಿನಲ್ಲಿ ನಿಲ್ಲುತ್ತಿವೆ ಎಂದರು.

ಭಾರತಕ್ಕೆ ಅಗತ್ಯವಿರುವ ಎಲ್‌ ಪಿಜಿಯಲ್ಲಿ ಶೇ. 60ರಷ್ಟು ಮಾತ್ರ ದೇಶದಲ್ಲಿ ಉತ್ಪಾದನೆಯಾಗುತ್ತಿದೆ, ಉಳಿದ ಶೇ. 40ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.  ಇಂಧನ ಸಮಸ್ಯೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

ಸದ್ಯ ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದ್ದು, ತೈಲ ಸರಬರಾಜು ನಿರಂತರವಾಗಿ ನಡೆಯುತ್ತಿರುವುದರಿಂದ ಪೆಟ್ರೋಲ್ ಲಭ್ಯತೆಯ ಬಗ್ಗೆ ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ