ಜನಸಂಕಲ್ಪ ಯಾತ್ರೆಗೆ ಹೊರಟಿರುವ ಸಿಎಂ ಬೊಮ್ಮಾಯಿ, ಬಿಎಸ್ ವೈಗೆ 2 ಸವಾಲು ಹಾಕಿದ ಸಿದ್ದರಾಮಯ್ಯ! - Mahanayaka
5:53 AM Saturday 15 - November 2025

ಜನಸಂಕಲ್ಪ ಯಾತ್ರೆಗೆ ಹೊರಟಿರುವ ಸಿಎಂ ಬೊಮ್ಮಾಯಿ, ಬಿಎಸ್ ವೈಗೆ 2 ಸವಾಲು ಹಾಕಿದ ಸಿದ್ದರಾಮಯ್ಯ!

siddaramaiha
12/10/2022

ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳಿಗೆ ನನ್ನ ಎರಡೇ ಎರಡು ಸವಾಲು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಎರಡು ಸವಾಲುಗಳನ್ನು ಹಾಕಿದ್ದಾರೆ.

* ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು ಹೋಗಿ.

*ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ.

ಎಂಬ ಎರಡು ಸವಾಲುಗಳನ್ನು ಹಾಕಿರುವ ಸಿದ್ದರಾಮಯ್ಯ ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಬಿ.ಎಸ್.ಯಡಿಯೂರಪ್ಪನವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಬಿ.ಎಸ್.ಯಡಿಯೂರಪ್ಪನವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು ಎಂದು ಅವರು ಜನಸಂಕಲ್ಪ ಯಾತ್ರೆಗೆ ತಿರುಗೇಟು ನೀಡಿದರು.

ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ ಬಸವರಾಜ ಬೊಮ್ಮಾಯಿ ಅವರೊಬ್ಬ ‘ಎರಡುವರೆ ಸಾವಿರ ಕೋಟಿ ರೂಪಾಯಿಯ #PayCM’’ ಹೈಕಮಾಂಡ್ ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಯಡಿಯೂರಪ್ಪನವರೇ ನಿಮ್ಮ ನರೇಂದ್ರಮೋದಿಯವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾ ಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಪಾಪ, ಯಡಿಯೂರಪ್ಪನವರು ಯಾರೋ ಬರೆದುಕೊಟ್ಟದ್ದನ್ನು ಓದಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ರೀತಿ ಕಾಲ ವ್ಯರ್ಥ ಮಾಡುವುದರ ಬದಲಿಗೆ ಒಳ್ಳೆಯ ವಕೀಲರ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಜೈಲು ಪಾಲಾಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿಯಿಂದ ಹಿಡಿದು ಇಲ್ಲಿಯ ವರೆಗೆ ಮೀಸಲಾತಿಯನ್ನು ಅಡಿಯಿಂದ ಮುಡಿವರೆಗೆ ವಿರೋಧಿಸುತ್ತಾ ಬಂದಿರುವ ಬಿಜೆಪಿಯ ಡಿ.ಎನ್.ಎ ಯಲ್ಲಿಯೇ ಮೀಸಲಾತಿ ವಿರೋಧ ಇದೆ. ಈ ನಾಲ್ಕು ದಿನಗಳ ನಾಟಕದ ಮಾತುಗಳನ್ನು ನಂಬುವಷ್ಟು ಜನ ಮೂರ್ಖರಲ್ಲ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ