ಕಳ್ಳತನ ದಂಧೆ ನಿಲ್ಲಿಸಲು ಪೊಲೀಸರೊಂದಿಗೆ ಕೈಜೋಡಿಸಿ: ಎಚ್.ಎಸ್.ನಂದೀಶ್ ಮನವಿ - Mahanayaka

ಕಳ್ಳತನ ದಂಧೆ ನಿಲ್ಲಿಸಲು ಪೊಲೀಸರೊಂದಿಗೆ ಕೈಜೋಡಿಸಿ: ಎಚ್.ಎಸ್.ನಂದೀಶ್ ಮನವಿ

kottige hara
18/08/2023


Provided by

ಕೊಟ್ಟಿಗೆಹಾರ: ಇತ್ತೀಚೆಗೆ ಬಣಕಲ್, ಬಾಳೂರು ಠಾಣಾ ವ್ಯಾಪ್ತಿಯಲ್ಲಿ ದೇವಾಲಯ, ಅಂಗಡಿಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಹಿನ್ನಲೆಯಲ್ಲಿ ಕೊಟ್ಟಿಗೆಹಾರ, ಅತ್ತಿಗೆರೆ, ಬಾಳೂರು ಭಾಗದಲ್ಲಿ ಪೊಲೀಸರು ಕಳ್ಳರ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸುವಂತೆ ಸೂಚಿಸಿದರು.

ಈ ಬಗ್ಗೆ ಬಾಳೂರು ಠಾಣೆಯ ಹೆಡ್ ಕಾನ್ ಸ್ಟೇಬಲ್ ಎಚ್.ಎಸ್.ನಂದೀಶ್ ಮಾತನಾಡಿ’ ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಕಳ್ಳತನ ತಡೆಯಲು ಸೂಚಿಸಲಾಗಿದೆ.ಇದರಿಂದ ಸಾರ್ವಜನಿಕರು ಕೆಲವು ನಿಯಮಗಳನ್ನು ಪಾಲಿಸಬೇಕು. ಮಹಿಳೆಯರು ಚಿನ್ನಾಭರಣಗಳನ್ನು ಹೆಚ್ಚಾಗಿ ಧರಿಸಿ ಪ್ರದರ್ಶಿಸಬೇಡಿ. ಕಳ್ಳಕಾಕರು ಯಾವುದೇ ಚಿನ್ನಾಭರಣಕ್ಕಾಗಿ ಕಿತ್ತುಕೊಳ್ಳಲು ಅವಕಾಶ ಕೊಡಬೇಡಿ ಎಂದರು.

ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಬೇಕು. ಹ್ಯಾಂಡ್ ಲಾಕ್ ಮಾಡಿ ಕಳ್ಳತನ ತಡೆಗಟ್ಟಬಹುದು. ಗುಮಾನಿ ವ್ಯಕ್ತಿಗಳ ಬಗ್ಗೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ,ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ತಳ್ಳುವುದು, ಬಾಲ್ಯ ವಿವಾಹದಂತಹ ಅಪರಾಧ ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನೆಯ ಸಮೀಪ ಬಂದು ನೀರು ಹಾಗೂ ವಿಳಾಸ ಕೇಳುವ ನೆಪದಲ್ಲಿ ಬರುವ ಮತ್ತು ಪೊಲೀಸರ ಸೋಗಿನಲ್ಲಿ ಬರುವ ವ್ಯಕ್ತಿಗಳೊಂದಿಗೆ ಜಾಗೃತವಾಗಿರುವುದು ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯವಾಗಿದೆ. ಮನೆ ಮತ್ತು ಅಂಗಡಿಗಳಿಗೆ ಹೆಚ್ಚಿನ ಭದ್ರತೆಗಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಜಾಗೃತರಾಗಿರಬೇಕು ಎಂದು ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ತಿಳಿಸಿದರು.

ಗ್ರಾಮದ ಹಿರಿಯರಾದ ಟಿ.ಎ.ಖಾದರ್ ಮಾತನಾಡಿ ‘ ಕೊಟ್ಟಿಗೆಹಾರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ದನಗಳು ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ಮಲಗಿ ತೊಂದರೆ ಕೊಡುತ್ತಿವೆ. ವಾಹನ ಸವಾರರಿಗೆ ದನಗಳು ರಸ್ತೆಯಲ್ಲೇ ಬೀಡು ಬಿಡುವುದರಿಂದ ಸಂಚಾರಕ್ಕೆ ಅನಾನು ಕೂಲವಾಗಿದೆ ಎಂದು ಪೊಲೀಸರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅಶೋಕ್ ಗ್ರಾಮಸ್ಥರಾದ ಟಿ.ಎ.ಖಾದರ್, ಟಿ.ಎಂ.ನರೇಂದ್ರ, ಲಿಂಗರಾಜ್, ಮುನೀರ್,ಪ್ರಸಾದ್ ಶೆಟ್ಟಿ, ಅಬ್ದುಲ್ ರೆಹಮಾನ್,ಸವಿನ್,ಎ.ಎಸ್.ನಾಗೇಶ್, ಸುರೇಶ್,ಹಾಗೂ ಆಟೋ ಸಂಘದ ಸದಸ್ಯರು ಇದ್ದರು.

 

ಇತ್ತೀಚಿನ ಸುದ್ದಿ