ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಎನ್.ರಾಜಣ್ಣ: ಕಾರಣ ಏನು?

ಬೆಂಗಳೂರು: ಸಚಿವ ಕೆ.ಎನ್.ರಾಜಣ್ಣ (K.N. Rajanna)ಪಕ್ಷದ ಹೈಕಮಾಂಡ್ ಸೂಚನೆಯಂತೆ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯನವರಿಗೆ ಕೆ.ಎನ್.ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಹಲವಾರು ವಿವಾದಗಳ ನಂತರವೂ ಸಚಿವ ರಾಜಣ್ಣನವರ ಸಚಿವ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಉಳಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಕೆ.ಎನ್.ರಾಜಣ್ಣ ನೀಡಿದ್ದ ಹೇಳಿಕೆಯೊಂದು ಇದೀಗ ಸಚಿವ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ಮತಗಳ್ಳನ ಆರೋಪ ಮಾಡಿದ್ದರು. ಆರೋಪದ ನಂತರ ರಾಜಣ್ಣ, ನಾವು ಮೊದಲು ಮತಪಟ್ಟಿ ನೋಡಿಕೊಳ್ಳದೇ ಈಗ ಹೇಳುತ್ತಿರುವುದಕ್ಕೆ ನಮಗೆ ನಾಚಿಕೆಯಾಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಸಿದ್ಧವಾಗಿತ್ತು. ಆಗೇನು ಕಣ್ಮುಚ್ಚಿ ಕುಳಿತಿದ್ರಾ? ಅಂತ ತಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದ್ದರು ಎನ್ನಲಾಗಿದೆ.
ಈ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿತ್ತು. ರಾಜಣ್ಣ ತುಮಕೂರಿನಲ್ಲಿ ಮಾತನಾಡಿದ ವಿಡಿಯೋವನ್ನು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ ಕಳುಹಿಸಿದ್ದರು. ರಾಹುಲ್ ಗಾಂಧಿ ಅವರ ಹೋರಾಟವನ್ನು ಅವಮಾನಿಸುವಂತ ರಾಜಣ್ಣ ಮಾತನಾಡಿದ್ದಾರೆ. ರಾಹುಲ್ ಆದೇಶದಂತೆ ರಾಜಣ್ಣ ಕೂಡಲೇ ರಾಜೀನಾಮೆ ನೀಡಬೇಕೆಂದು ಸುರ್ಜೇವಾಲಾ ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ. ಈ ಆದೇಶದ ಬೆನ್ನಲ್ಲೇ ರಾಜಣ್ಣ ಪುತ್ರ ರಾಜೇಂದ್ರ ಮೂಲಕ ರಾಜೀನಾಮೆ ಪತ್ರವನ್ನು ಸಿಎಂಗೆ ಸಲ್ಲಿಸಿದ್ದಾರೆ. ತಮ್ಮ ಆಪ್ತ ಸಚಿವರಾಗಿದ್ದರೂ, ಹೈಕಮಾಂಡ್ ಆದೇಶದಂತೆ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD