ದಲಿತ ಮಹಿಳೆಯರ ಬಗ್ಗೆ ಅವಹೇಳನಾಕಾರಿ ಹೇಳಿಕೆ: ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಗೆ ಹೈಕೋರ್ಟ್ ರಿಲೀಫ್
ಬೆಂಗಳೂರು/ಕೊಪ್ಪಳ: ‘ಚಾಮುಂಡಿ ತಾಯಿಯ ಮೇಲೆ ಹೂ ಹಾಕುವವರು ಸನಾತನ ಧರ್ಮೀಯರೇ ಆಗಬೇಕು, ಸಾಮಾನ್ಯವಾದ ಒಬ್ಬ ದಲಿತ ಮಹಿಳೆಗೂ ಆ ಅಧಿಕಾರ ಇಲ್ಲ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಯತ್ನಾಳ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಯತ್ನಾಳ್ ಹೇಳಿಕೆಯನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಆದೇಶ ನೀಡಿದೆ.
ಯತ್ನಾಳ್ ಹೇಳಿಕೆಗೆ ಸಂಬಂಧಿಸಿದಂತೆ ಅಟ್ರಾಸಿಟಿ ಕಾಯ್ದೆಯಡಿ ಕೊಪ್ಪಳದಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಯತ್ನಾಳ್ ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ.
ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿ, ಸನಾತನ ಧರ್ಮದ ಹೆಣ್ಣುಮಕ್ಕಳಿಗೆ ಚಾಮುಂಡಿ ತಾಯಿಗೆ ಪೂಜೆ ಹಕ್ಕಿದೆ. ದಲಿತ ಹೆಣ್ಣುಮಕ್ಕಳರಲಿ ಯಾವುದೇ ಸಮಾಜದವರಿರಲಿ ಹಕ್ಕಿದೆ ಎಂದು ಯತ್ನಾಳ್ ಅವರು ಹೇಳಿದ್ದಾರೆ. ಆದ್ರೆ, ಅವರ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ್ದಾರೆ ಎಂದರು. ಅಲ್ಲದೇ ವಿಡಿಯೋವೊಂದನ್ನು ಜಡ್ಜ್ ಗೆ ಕೇಳಿಸಿದರು. ಇದನ್ನು ಪರಿಗಣಿಸಿ ಹೈಕೋರ್ಟ್, ಯತ್ನಾಳ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಆದೇಶ ನೀಡಿತು ಎಂದು ವರದಿಯಾಗಿದೆ.
ರಾಜ್ಯ ಸರ್ಕಾರ ವಿಫಲ:
ದಲಿತ ಮಹಿಳೆಯರ ಬಗ್ಗೆ ಯತ್ನಾಳ್ ನೀಡಿರುವ ಹೇಳಿಕೆ ‘ಚಾಮುಂಡಿ ತಾಯಿಯ ಮೇಲೆ ಹೂ ಹಾಕುವವರು ಸನಾತನ ಧರ್ಮೀಯರೇ ಆಗಬೇಕು, ಸಾಮಾನ್ಯವಾದ ಒಬ್ಬ ದಲಿತ ಮಹಿಳೆಗೂ ಆ ಅಧಿಕಾರ ಇಲ್ಲ’ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಸರ್ಕಾರ ಯತ್ನಾಳ್ ಹೇಳಿಕೆಯ ಬಗ್ಗೆ ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ದಲಿತ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎನ್ನುವ ಆಕ್ರೋಶ ವ್ಯಾಪಕವಾಗಿ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























