ಕಾರ್ಯಕರ್ತರ ನಿರೀಕ್ಷೆಯಂತಿರಲಿಲ್ಲ ಪ್ರಧಾನಿ ಮೋದಿ ಕಾರ್ಯಕ್ರಮ! - Mahanayaka
10:09 PM Friday 19 - December 2025

ಕಾರ್ಯಕರ್ತರ ನಿರೀಕ್ಷೆಯಂತಿರಲಿಲ್ಲ ಪ್ರಧಾನಿ ಮೋದಿ ಕಾರ್ಯಕ್ರಮ!

modi in mangalore
03/09/2022

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ 2ರಂದು ಮಂಗಳೂರಿಗೆ ಆಗಮಿಸಿ 3,800 ಕೋಟಿ ರೂಪಾಯಿ ವೆಚ್ಚದ 8 ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಕಾರ್ಯಕ್ರಮಕ್ಕೆ ನೂರಾರು ನಿರೀಕ್ಷೆಗಳೊಂದಿಗೆ ಆಗಮಿಸಿದ್ದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಕಾರ್ಯಕ್ರಮ ಇರಲಿಲ್ಲ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ಸಮಾವೇಶದ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಪ್ರಚಾರ ನೀಡಲಾಗಿತ್ತು. ಸಮಾವೇಶದ ಮೂಡ್ ನಲ್ಲಿ ಬಂದಿದ್ದ ಕಾರ್ಯಕರ್ತರಿಗೆ ಭಾರೀ ನಿರಾಸೆಯಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಿನಿಮಾ, ನಾಟಕ, ಯಕ್ಷಗಾನ ಕಲಾವಿದರಿಂದ ಪ್ರಚಾರ ನೀಡಲಾಗಿತ್ತು.  ಆದರೂ ಸಾಕಷ್ಟು ಪ್ರದೇಶಗಳಿಂದ ಕಾರ್ಯಕ್ರಮಕ್ಕೆ ಜನರು ಆಗಮಿಸಿಲ್ಲ ಎನ್ನುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರಧಾನಿ ಕಾರ್ಯಕ್ರಮಕ್ಕೆ ಈ ಹಿಂದೆ ಇದ್ದ ಜೋಶ್ ಕಂಡು ಬರಲಿಲ್ಲ.

ಪ್ರಧಾನಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರಿಗೆ ಒಂದೆರಡು ನಿಮಿಷಗಳ ಮೌನಾಚರಣೆಯನ್ನಾದರೂ ನಿರೀಕ್ಷಿಸಲಾಗಿತ್ತು. ಕನಿಷ್ಠ ಪಕ್ಷ ಅವರ ನಿಧನದ ವಿಚಾರವಾಗಿ ಪ್ರಧಾನಿ ಮೋದಿಜಿ ಒಂದೆರಡು ಮಾತುಗಳನ್ನಾಡುತ್ತಾರೆ, ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ ಎನ್ನುವ ನಿರೀಕ್ಷೆ ಕಾರ್ಯಕರ್ತರಿಗಿತ್ತು. ಆದರೆ, ಕಾರ್ಯಕ್ರಮ ಆಯೋಜಕರ ವೈಫಲ್ಯವೋ ಅಥವಾ ಇದು ಸರ್ಕಾರಿ ಕಾರ್ಯಕ್ರಮ ಎನ್ನುವ ಕಾರಣಕ್ಕೋ ಪ್ರವೀಣ್ ನೆಟ್ಟಾರು ಹೆಸರು ಎಲ್ಲಿಯೂ ಕೇಳಿ ಬರಲಿಲ್ಲ. ಕಾರ್ಯಕರ್ತರ ತ್ಯಾಗವನ್ನು ನೆನೆಯುವ ಕೆಲಸ ಆಗಲಿಲ್ಲ ಎನ್ನುವ  ಮಾತುಗಳು  ಕೂಡ ಕೇಳಿ ಬಂದಿದೆ.

ಸಮಾವೇಶದ ಜೋಶ್ ನಲ್ಲಿ ಆಗಮಿಸಿದ್ದ ಕಾರ್ಯಕರ್ತರಿಗೆ ಸರ್ಕಾರಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾದ ಕಾರ್ಯಕ್ರಮ ನಿರಾಸೆ ತಂದಿತ್ತು.  ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಮಾತ್ರವೇ ಕಾರ್ಯಕ್ರಮ ಸೀಮಿತವಾಯ್ತು ಅನ್ನೋ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ