ಲೀಲಾಧರ್ ಶೆಟ್ಟಿ ದತ್ತು ಪುತ್ರಿಯ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್

ಕಾಪು: ತಮ್ಮ ದತ್ತು ಪುತ್ರಿಯನ್ನು ಅಪಹರಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ನೊಂದಿದ್ದ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಇತ್ತೀಚೆಗೆ ಸಾವಿಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಬಾಲಕಿಯ ಸ್ನೇಹಿತ ಶಿರ್ವಾ ನಿವಾಸಿ ಗಿರೀಶ್(20), ಅಪಹರಿಸಲು ಸಹಕಾರ ನೀಡಿದ ರೂಪೇಶ್(22), ಜಯಂತ್(23) ಹಾಗೂ ಮಜೂರು ನಿವಾಸಿ ಮಹಮ್ಮದ್ ಅಜೀಜ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
16 ವರ್ಷಗಳ ಹಿಂದೆ ಲೀಲಾಧರ್ ಶೆಟ್ಟಿ ಅವರು ಹೆಣ್ಣು ಮಗುವೊಂದನ್ನು ದತ್ತುಪಡೆದುಕೊಂಡಿದ್ದರು. ಆದ್ರೆ ಡಿಸೆಂಬರ್ 11ರಂದು ಮನೆಯಿಂದ ಹೊರ ಹೋಗಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಅದೇ ದಿನ ರಾತ್ರಿ ಸಮಾಜಕ್ಕೆ ಹೆದರಿ ಲೀಲಾಧರ್ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್. ಶೆಟ್ಟಿ ಒಂದೇ ಸೀರೆಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ಅಪಹರಿಸಿದ್ದ ಗಿರೀಶ್ ವಿರುದ್ಧ ಪೋಕ್ಸೋ, ಅತ್ಯಾಚಾರ, ಅಪಹರಣ ಪ್ರಕರಣ ಮತ್ತು ಇತರ ಮೂವರ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಲಾಗಿತ್ತು.
ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.