ಮಗಳೊಂದಿಗೆ ಕ್ಷಿಪಣಿ ಪರೀಕ್ಷೆ ವೀಕ್ಷಿಸಿದ ಕಿಮ್ ಜಾಂಗ್ ಉನ್: ಶತ್ರು ರಾಷ್ಟ್ರಗಳಿಗೆ ನಡುಕ - Mahanayaka

ಮಗಳೊಂದಿಗೆ ಕ್ಷಿಪಣಿ ಪರೀಕ್ಷೆ ವೀಕ್ಷಿಸಿದ ಕಿಮ್ ಜಾಂಗ್ ಉನ್: ಶತ್ರು ರಾಷ್ಟ್ರಗಳಿಗೆ ನಡುಕ

kim jong un and daughter ju ae
15/03/2026

ಪಯೋಂಗ್ಯಾಂಗ್: ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಹದಿಹರೆಯದ ಮಗಳ ಜೊತೆಗೂಡಿ ಭೀಕರ ರಾಕೆಟ್ ಲಾಂಚರ್ ಪರೀಕ್ಷೆಯನ್ನು ವೀಕ್ಷಿಸಿದ್ದಾರೆ. ಈ ಮೂಲಕ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸೇನಾ ಅಭ್ಯಾಸಕ್ಕೆ ಉತ್ತರ ಕೊರಿಯಾ ಪ್ರಬಲ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 12 ಅತ್ಯಾಧುನಿಕ 600mm ರಾಕೆಟ್ ಲಾಂಚರ್‌ ಗಳನ್ನು ಬಳಸಲಾಗಿದೆ. ಇದು ಶತ್ರುಗಳ ಮಿಲಿಟರಿ ಮೂಲಸೌಕರ್ಯಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಈ ಶಸ್ತ್ರಾಸ್ತ್ರ ವ್ಯವಸ್ಥೆಯು ಸುಮಾರು 420 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಇದು “ಟ್ಯಾಕ್ಟಿಕಲ್ ನ್ಯೂಕ್ಲಿಯರ್ ವೆಪನ್” (ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರ) ದ ವಿನಾಶಕಾರಿ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಈ ಮಹತ್ವದ ಪರೀಕ್ಷೆಯ ಸಮಯದಲ್ಲಿ ಕಿಮ್ ಜಾಂಗ್ ಉನ್ ಅವರ ಪುತ್ರಿ ಕಿಮ್ ಜು ಏ (Kim Ju Ae) ತಂದೆಯ ಜೊತೆಗಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಪ್ರಮುಖ ಮಿಲಿಟರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಉತ್ತರ ಕೊರಿಯಾದ ಮುಂದಿನ ಉತ್ತರಾಧಿಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ ‘ಫ್ರೀಡಂ ಶೀಲ್ಡ್’ (Freedom Shield) ಎಂಬ ಜಂಟಿ ಸೇನಾ ಅಭ್ಯಾಸವು ತಮ್ಮ ದೇಶದ ಮೇಲೆ ದಾಳಿ ಮಾಡುವ ಸಂಚು ಎಂದು ಉತ್ತರ ಕೊರಿಯಾ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸರಣಿ ಕ್ಷಿಪಣಿ ಪರೀಕ್ಷೆಗಳ ಮೂಲಕ ಕಿಮ್ ಜಾಂಗ್ ಉನ್ ಪ್ರತಿರೋಧ ಒಡ್ಡುತ್ತಿದ್ದಾರೆ.

ದಕ್ಷಿಣ ಕೊರಿಯಾದ ಮಿಲಿಟರಿ ಈ ಪರೀಕ್ಷೆಯನ್ನು ಖಂಡಿಸಿದ್ದು, ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಈ ರಾಕೆಟ್ ಪರೀಕ್ಷೆಗಳು ಕೊರಿಯಾ ಪರ್ಯಾಯ ದ್ವೀಪದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ