ಕ್ರೀಡೆಯಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ: ಸಚಿವ ಡಾ.ಅಶ್ವಥ್ ನಾರಾಯಣ - Mahanayaka

ಕ್ರೀಡೆಯಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ: ಸಚಿವ ಡಾ.ಅಶ್ವಥ್ ನಾರಾಯಣ

ashwath narayan
26/11/2022

ಉಡುಪಿ: ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು  ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ & ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು.

ಅವರು ಇಂದು ಕೋಟ ವಿವೇಕ ಹೈಸ್ಕೂಲ್ ಆವರಣದಲ್ಲಿ,  ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಹೊಳಪು-೨೦೨೨ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‌ ರಾಜ್ ಮತ್ತು ನಗರ ಸ್ಥಳಿಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ನಿವಾರಣೆ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು  ಎದುರಿಸಲು ಅಗತ್ಯವಿರುವ  ಶಕ್ತಿಯನ್ನು  ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಡೆಯಬಹುದಾಗಿದೆ. ನಿರಂತರ ಇಂತಹ ಚಟುಚಟಿಕೆಯಲ್ಲಿ ಭಾಗವಹಿಸುವ ಮೂಲಕ  ಸಂವಿಧಾನದ ಆಶಯದಂತೆ  ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಸಮಾನತೆ ಮತ್ತು  ಅಭಿವ್ಯಕ್ತಿ  ಸ್ವಾತಂತ್ರ್ಯವನ್ನು  ಕ್ರೀಡೆಯ ಮೂಲಕ ಸಮರ್ಥವಾಗಿ ನೀಡಬಹುದಾಗಿದ್ದು, ಸಂವಿಧಾನದ ಆಶಯಗಳಿಗೆ ಎಲ್ಲರೂ ಬದ್ದರಾಗಿರಬೇಕು ಎಂದರು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಪಥಸಂಚಲನದ ಗೌರವ ಸ್ವೀಕರಿಸಿದರು.

ಭಟ್ಕಳ ಶಾಸಕ ಸುನೀಲ್ ನಾಯಕ್ ಕ್ರೀಡಾಕೂಟದ ಪಥಸಂಚಲನಕ್ಕೆ ಚಾಲನೆ ನೀಡಿದರು.ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಕ್ರೀಡಾ ಪ್ರತಿಜ್ಞಾ ವಿಧಿ ಭೋಧಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಅಧ್ಯಕ್ಷ ಡಾ. ಎಮ್.ಎನ್ ರಾಜೇಂದ್ರ ಕುಮಾರ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.

ಸಂವಿಧಾನ ದಿನದ ಪ್ರಯುಕ್ತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸಂವಿಧಾನ ದಿನದ ಪ್ರಸ್ತಾವನೆ ಭೋದಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅತ್ಯುತ್ತಮ ಗ್ರಾಮ ಪಂಚಾಯತ್ ಗಳಿಗೆ ಪ್ರಶಸ್ತಿ ವಿತರಿಸಿದರು.

ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು, ಪಿಡಿಓ ಜಯರಾಂ ಶೆಟ್ಟಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.

ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಅಕರ್ಷಕ ಪಥ ಸಂಚಲನ ನಡೆಸಿದರು. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸ್ಥಬ್ದಚಿತ್ರ ಮತ್ತು ವೇಷ ಭೂಷಣಗಳು ಗಮನ ಸೆಳೆದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ