ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದ ಒಳಗಿರುವ ಮೂಲ ನಿವಾಸಿಗಳು ಕತ್ತಲೆಯಲ್ಲಿ! - Mahanayaka
11:23 AM Wednesday 20 - August 2025

ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದ ಒಳಗಿರುವ ಮೂಲ ನಿವಾಸಿಗಳು ಕತ್ತಲೆಯಲ್ಲಿ!

belthangady
27/08/2022


Provided by

ಬೆಳ್ತಂಗಡಿ: ಸ್ವಾತಂತ್ರ್ಯ ಬಂದು 75ವರ್ಷಗಳು ಕಳೆದು ಎಲ್ಲರೂ ಅಮೃತ ಮಹೋತ್ಸವ ಆಚರಿಸಿದಾಗಲೂ ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದ ಒಳಗಿರುವ ಮೂಲ ನಿವಾಸಿಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ಲಲಿನಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಅವರಿಗೆ ನೀಡಿರುವ ಸೋಲಾರ್ ಗಳೂ ವರ್ಷದಲ್ಲಿ ಕೆಲಚು ತಿಂಗಳು ಮಾತ್ರ ಬೆಳಕು ನೀಡುತ್ತದೆ. ಈಗ ಅದೂ ಕೆಟ್ಟು ಹೋಗಿದೆ ಅವರಿಗೆ ಕನಿಷ್ಟ ಸೀಮೆ ಎಣ್ಣೆಯಾದರೂ ನೀಡಲು ಕ್ರಮ ಕೈಗೊಳ್ಳಿ ಎಂದು ಬೆಳ್ತಂಗಡಿಯ ಮಿನಿ ವಿಧಾನ ಸೌಧದಲ್ಲಿ ನಡೆದ ಪರಿಶಿಷ್ಟಜಾತಿ ಪಂಗಡಗಳ ಮುಂದಾಳುಗಳ ಸಭೆಯಲ್ಲಿ ಶೇಖರ ಲಾಯಿಲ ಒತ್ತಾಯಿಸಿದರು.

ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶೇಖರ ಲಾಯಿಲ ಅವರು, ವಿದ್ಯುತ್ ಸಂಪರ್ಕ ಕೊಡುವುದಿಲ್ಲ, ಕೊಟ್ಟ ಸೋಲಾರ್ ಗಳು ದುರಸ್ತಿ ಮಾಡಿದರೂ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುತ್ತಿದೆ. ಏನು ಮಾಡಲಿ ಎಂದು ಪ್ರಶ್ನಿಸಿದರು.ಇದಕ್ಕೆ ಜಯಾನಂದ ಹಾಗೂ ಇತರರೂ ಧ್ವನಿ ಗೂಡಿಸಿದರು.  ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಈ ಹಿಂದೆ ದೂರು ಬಂದಾಗ ಎಲ್ಲ ಗ್ರಾಮಗಳಿಗೂ ತೆರಳಿ ದುರಸ್ತಿ ಮಾಡಿದ್ದೇವೆ ಹಾಳಾಗಿದ್ದರೆ ಕಂಪೆನಿಯವರಿಗೆ ಹೇಳಿ ಮುಂದಿನ ತಿಂಗಳು ಮತ್ತೊಮ್ಮೆ ಸೋಲಾರ್ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಡಿ.ಸಿ ಮನ್ನಾ ಜಮೀನಿನ ಕುರಿತು ಪ್ರತಿ ಸಭೆಯಲ್ಲಿ ಚರ್ಚಿಸಿದರೂ ಯಾವುದೇ ಪ್ರಗತಿಯಾಗದ ಕುರಿತು ದಲಿತ ಮುಖಂಡರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಸಭೆಗಳಲ್ಲಿಯೂ ಯಾವುದಾದರೂ ಒಂದು ಕಾರಣ ಹೇಳಿ ವಿಚಾರ ಮುಂದೂಡಲಾಗುತ್ತಿದೆ ನಮಗೆ ಸ್ಪಷ್ಟವಾದ ಮಾಹಿತಿ ನೀಡಿ ಎಂದು ನೇಮಿರಾಜ್ ಒತ್ತಾಯಿಸಿದರು. ಇದಕ್ಕೆ ಬಿ.ಕೆ ವಸಂತ, ಸಂಜೀವ.ಆರ್, ಬೇಬಿ ಸುವರ್ಣ, ಬಾಬು, ಶೇಷಪ್ಪ ಸೇರಿದಂತೆ ಎಲ್ಲರೂ ಧ್ವನಿ ಗೂಡಿಸಿದರು. ಡಿಸಿ ಮನ್ನಾ ಜಮೀನಿನ ಕುರಿತು ತಪ್ಪು ಮಾಹಿತಿಗಳನ್ನು ಸಭೆಗೆ ನೀಡಲಾಗುತ್ತಿದೆ. ಬ್ರಿಟೀಷರು ಶೋಷಿತರಿಗಾಗಿ ಕಾಯ್ದಿರಿಸಿದ್ದ ಭೂಮಿಯನ್ನು ಪಡೆಯಲು ನಾವು ಹೋರಾಟ ಮಾಡಬೇಕಾದಂತಹ ಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಹಶೀಲ್ದಾರ್ ಅವರು ಡಿ.ಸಿ ಮನ್ನಾ ಜಮೀನಿನ ಕುರಿತು ಮರು ಸರ್ವೆ ಕಾರ್ಯ ಮಾಡುವ ಭರವಸೆ ನೀಡಿದರು.ಈ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ನಡೆಸುವಂತೆ ಮುಖಂಡರುಗಳು ಒತ್ತಾಯಿಸಿದರು. ಮುಂದಿನ ತಿಂಗಳಿನಲ್ಲಿ ಡಿ.ಸಿ ಮನ್ನಾ ಜಮೀನಿನ ಬಗ್ಗೆ ಚರ್ಚಿಸಲು ಪ್ರತ್ಯೇಕ ಅಭೆ ನಡೆಸುವುದಾಗಿ ತಹಶೀಲ್ದಾರರು ತಿಳಿಸಿದರು.

ಪರಿಶಿಷ್ಟ ಜಾತಿ ಪಂಗಡದವರಿಗೆ ಮಂಜೂರಾಗಿರುವ ಜಮೀನಿನಲ್ಲಿ ಮನೆ ಕಟ್ಟಲು ಜಮೀನನ್ನು ಭೂ ಪರಿವರ್ತನೆ ಮಾಡಲು ಸರಕಾರದ ಅನುಮತಿ ಪಡೆಯಬೇಕು ಎಂಬ ಕಾನೂನಿನಿಂದಾಗಿ ಕನಿಷ್ಟ ಮನೆಯನ್ನು ಕಟ್ಟಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಭೂ ಪರಿವರ್ತನೆಗೆ ತಹಶೀಲ್ದಾರರಿಗೆ ಅಥವಾ ಜಿಲ್ಲಾಧಿಕಾರಿಯವರಿಗೆ ಅಧಿಕಾರ ನೀಡಬೇಕು ಎಂದು ಬೇಬಿ ಸುವರ್ಣ, ಶೇಷಪ್ಪ, ಸಂಜೀವ ಒತ್ತಾಯಿಸಿದರು. ಇದು ಪರಿಶಿಷ್ಟ ಜಾತಿ ಪಂಗಡದವರ ಜಮೀನನ್ನು ಇತರರು ಕಬಳಿಸದಂತೆ ಮಾಡಿದ ಕಾನೂನಾಗಿದ್ದು ಇದರಿಂದ ಸಮಾಜದ ಜನರಿಗೆ ತೊಂದರೆಯಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಹಶೀಲ್ದಾರರು ತಿಳಿಸಿದರು.

ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಿನ ಕ್ರೀಡಾಂಗಣದ ಜಾಗವನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಅದು ಪೂರ್ಣಗೊಂಡ ಕೂಡಲೇ ನೂತನ ಅಂಬೇಡ್ಕರ್ ಭಾವನ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಕುಕ್ಕೇಡಿಯಲ್ಲಿ ಅಂಬೇಡ್ಕರ್ ಭವನದ ಸಮೀಪ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಶೇಖರ ಕುಕ್ಕೇಡಿ ಅವರು ತಿಳಿಸಿದರು ಈ ಬಗ್ಗೆ ಹಿತಿಯ ಅಧಿಕಾರಿಗಳು ಸ್ಥಳಕಗಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಖುವುದೆಂದು ನಿರ್ಧರಿಸಲಾಯಿತು.

ಸಭೆಯಲ್ಲಿ ಮೆಸ್ಕಾ ಇಂಜಿನಿಯರ್ ಶಿವಶಂಕರ್ ಅವರು ಪರಿಶಿಷ್ಟ ಜಾತಿ ಪಂಗಡದವರಿಗೆ 75ಯೂನಿಟ್ ವರೆಗೆ ವಿದ್ಯುತ್ ಉಪಯೋಗಕ್ಕೆ ಸಬ್ಸಿಡಿ ನೀಡುವ ವಿಚಾರದ ಕುರಿತು ಮಾಹಿತಿನೀಡಿ ಇಲಾಖೆಗೆ ಬಂದು ಮಾಹಿತಿ ಪಡೆದು ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಹಿರಿಯ ದಲಿತ ಮುಖಂಡ ಡೀಕಯ್ಯ ಅವರ ಮರಣದ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಮಾಹಿತಿ ನೀಡಿದ ಬೆಳ್ತಂಗಡಿ ಪಿ.ಎಸ್.ಐ ನಂದಕುನಾರ್ ಅವರು ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಹೇಮಚಂದ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ