ಕುಳಾಯಿ ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - Mahanayaka
1:08 PM Thursday 29 - January 2026

ಕುಳಾಯಿ ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

29/01/2026

ಮಂಗಳೂರು: ಕುಳಾಯಿಯ ಮನೆಯೊಂದರ ಹಂಚು ತೆಗೆದು ಒಳನುಗ್ಗಿ ದೈವಗಳ ಮೂರ್ತಿ ಹಾಗೂ ಟಿವಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ವಾಜೀದ್ ಜೆ (27) ಮತ್ತು ಜೋಕಟ್ಟೆಯ ಸಯ್ಯದ್ ಆಲಿ (40) ಬಂಧಿತರು.

ಕಳೆದ ಡಿಸೆಂಬರ್ 26ರಂದು ಕುಳಾಯಿ ಗ್ರಾಮದ ಯಶೋಧ ಕ್ಲಿನಿಕ್ ಬಳಿಯ ಅಮಿತಾ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು, ಪಸಪ್ಪ ದೈವದ ತಾಮ್ರದ ಮೂರ್ತಿ, ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕಲ್ಲುರ್ಟಿ ಪಂಜುರ್ಲಿ ವಿಗ್ರಹ, ಬೆಳ್ಳಿಯ ಕಡ್ಸಲೆ ಹಾಗೂ ಟಿವಿಯನ್ನು ದೋಚಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ವಾಜೀದ್‌ನನ್ನು ವಿಚಾರಣೆ ನಡೆಸಿದಾಗ, ಆತ ಕದ್ದ ಸೊತ್ತುಗಳನ್ನು ಸಯ್ಯದ್ ಆಲಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಬಂಧಿತರಿಂದ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ-ತಾಮ್ರದ ಪೂಜಾ ಸಾಮಗ್ರಿಗಳು, ಎಲ್‌ಇಡಿ ಟಿವಿ ಹಾಗೂ ಕಾವೂರು ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ವಾಜೀದ್ ಹಳೆಯ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ವಿವಿಧ ಜಿಲ್ಲೆಗಳಲ್ಲಿ ಕೊಲೆಯತ್ನ, ದರೋಡೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳಿವೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು: ಕದ್ರಿ ಜೋಗಿ ಮಠದ ಕಚೇರಿಯಿಂದ ಬೆಳ್ಳಿ ಆಭರಣ, ನಗದು ಕಳವು

ಮಂಗಳೂರು: ನಗರದ ಪ್ರಸಿದ್ಧ ಕದ್ರಿ ಜೋಗಿ ಮಠದ ಆವರಣದಲ್ಲಿರುವ ಜೋಗಿ ಮಠ ಜೀರ್ಣೋದ್ದಾರ ಮತ್ತು ಕಾರ್ಯ ನಿರ್ವಹಣಾ ಸಮಿತಿ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ದೈವ-ದೇವರ ಬೆಳ್ಳಿ ಆಭರಣಗಳು ಹಾಗೂ ನಗದು ಕಳವಾಗಿರುವ ಬಗ್ಗೆ ವರದಿಯಾಗಿದೆ.

ಘಟನೆಯ ವಿವರ: ಕಚೇರಿಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕವಾಟಿನಲ್ಲಿದ್ದ ಧೂಮಾವತಿ ದೈವ ಮತ್ತು ಗಣಪತಿ ದೇವರ ಅಮೂಲ್ಯ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಜೂನ್ 27ರಂದು ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕಳವಾದ ಸೊತ್ತುಗಳು:

  • ಧೂಮಾವತಿ ದೈವದ 7 ಬೆಳ್ಳಿಯ ಗುಬ್ಬೆಗಳು, ಒಂದು ಅರ್ಧ ಚಂದ್ರಾಕೃತಿಯ ಆಭರಣ, ಒಂದು ಬೆಳ್ಳಿಯ ದೊಡ್ಡ ಹೂವು, ಒಂದು ಸಣ್ಣ ಹೂವು ಹಾಗೂ ಒಂದು ಗಂಧದ ಗಿಂಡಿ ಬಟ್ಟಲು ಕಳವಾಗಿದೆ.
  • ಗಣಪತಿ ದೇವರ ಒಂದು ಬೆಳ್ಳಿಯ ಸೊಂಡಿಲು ಕಟ್ಟ, ಮೂರು ಬೆಳ್ಳಿಯ ಕೈಕಡಗಗಳು, ಬೆಳ್ಳಿಯ ಕಿವಿಯ ಕುಂಡಲ ಹಾಗೂ ಎರಡು ಕಾಲ್ಗಡಗಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
  • ಒಟ್ಟು ಸುಮಾರು 511 ಗ್ರಾಂ ತೂಕದ ಬೆಳ್ಳಿ ಆಭರಣಗಳು (ಅಂದಾಜು ಮೌಲ್ಯ 90,000 ರೂ.) ಮತ್ತು 40,000 ರೂ. ನಗದು ಸೇರಿ ಒಟ್ಟು 1,30,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೋಗಿ ಮಠದ ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷರಾದ ಹರಿನಾಥ ಎಂ. ಅವರು ನೀಡಿದ ದೂರಿನ ಮೇರೆಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ