ಕುಲಕಸುಬಿಗೂ – ಅಸ್ಪ್ರಶ್ಯತೆಗೂ ಸಂಬಂಧವಿದೆ: ಡಾ. ಗಣನಾಥ ಶೆಟ್ಟಿ ಎಕ್ಕಾರ್

ಅಸಮಾನತೆ ಶೋಷಣೆಗಳು ಮುಂಬರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕುಲಕಸುಬಿಗೂ ಅಸ್ಪ್ರಶ್ಯತೆಗೂ ಸಂಬಂಧವಿದೆ. ಮನುಷ್ಯ ವ್ಯಕ್ತಿತ್ವ ಸ್ವಾಭಿಮಾನ ಮತ್ತು ಗೌರವಗಳನ್ನು ಪರಿಗಣಿಸದ ಸಾಮಾಜಿಕ ಹಿನ್ನೆಲೆಯಲ್ಲಿ ಕುಲಕಸುಬುಗಳನ್ನು ಕೇವಲ ಆರ್ಥಿಕತೆಯ ಮತ್ತು ಸಂಸ್ಕೃತಿ ಎಂಬ ನೆಲೆಯಲ್ಲಿ ಪರಿಗಣಿಸುವ ದೃಷ್ಠಿಕೋನ ಲಪ್ರಶ್ನಾರ್ಹ ಎಂದು ಖ್ಯಾತ ಜಾನಪದ ವಿದ್ವಾಂಸರಾದ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಅಭಿಪ್ರಾಯ ಪಟ್ಟರು.ಬೆಳ್ಮಣ್ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪಡುಬಿದ್ರಿ ವಲಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಆದಿವಾಸಿ ಕೊರಗ ಸಮುದಾಯದ ಸಂಸ್ಕೃತಿ ಬಹಳ ಸರಳ ಸಂಸ್ಕೃತಿಯಾಗಿದೆ. ಇದರ ಪರಾಮರ್ಶೆ ಅಗತ್ಯವಿದೆ. ಚರಿತ್ರೆ ಮತ್ತು ಸಂಸ್ಕೃತಿಯನ್ನು ಪುನರ್ ವಿಮರ್ಶೆ ಮಾಡಿ ಅಳವಡಿಸಬೇಕು ಎಂದು ಹೇಳಿದರು. ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಯ ಮೇಲೆ ಹೇರುವುದನ್ನು ವಿರೋಧಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ ನೆಲ, ಜಲ, ಅರಣ್ಯಗಳ ಮೂಲ ವಾರೀಸುದಾರರಾದ ಆದಿವಾಸಿಗಳನ್ನು ಚರಿತ್ರೆಯ ನಿರ್ದಿಷ್ಟ ಕಾಲಘಟ್ಟದಲ್ಲಿ ಬೇರ್ಪಡಿಸುವ ಪ್ರಕ್ರಿಯೆ ನಡೆದಿದ್ದು ಅದು ಈಗಲೂ ಮುಂದುವರಿಯುತ್ತಿದೆ. ಆದಿವಾಸಿ ಸಮುದಾಯದಲ್ಲಿ ಇಂದು ಮನುಷ್ಯ ವಿಕಾಸ ಪ್ರಕ್ರಿಯೆಯ ಮೂಲಭೂತ ಅಂಶಗಳಾದ ಆಹಾರ ಶೇಖರಣೆ, ಸಂಗ್ರಹಣೆಯ ಘಟ್ಟಗಳ ಬಗ್ಗೆ ಸಾಕಷ್ಟು ಉದಾಹರಣೆಗಳು ಇಂದೂ ಬರುವ ದಿನ ನಿತ್ಯದ ಚರ್ಚೆಗಳಲ್ಲಿ ಹಾಸು ಹೊಕ್ಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳಜ್ಯೋತಿ ಘಟಕದ ಅಧ್ಯಕ್ಷರಾದ ಕರಿಯ ಕೆ ಮಾತನಾಡಿದರು. ಸಭೆಯ ಅಧ್ಯಕ್ಷತೆ ಕೃಷ್ಣ ಇನ್ನಾ ವಹಿಸಿದ್ದು, ತುಳಸಿ ಬೆಳ್ಮಣ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಶ್ಚಿತ ವಂದಿಸಿದರು.