ತರುವೆ ಗ್ರಾ.ಪಂಯಲ್ಲಿ ಭಾರೀ ಅವ್ಯವಹಾರ: ಸದಸ್ಯತ್ವ ಸ್ಥಾನ ವಜಾಕ್ಕೆ ಆಗ್ರಹ - Mahanayaka
11:35 PM Wednesday 12 - November 2025

ತರುವೆ ಗ್ರಾ.ಪಂಯಲ್ಲಿ ಭಾರೀ ಅವ್ಯವಹಾರ: ಸದಸ್ಯತ್ವ ಸ್ಥಾನ ವಜಾಕ್ಕೆ ಆಗ್ರಹ

chikamagalore
06/02/2024

ಚಿಕ್ಕಮಗಳೂರು: ಅಧಿಕಾರ ದುರುಪಯೋಗ ಮಾಡಿಕೊಂಡು ತಾಲೂಕಿನ ತರುವೆ ಗ್ರಾ.ಪಂ. ಯಲ್ಲಿ ನರೇಗಾ ಯೋಜನೆಯಡಿ ನಡೆಸಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಲಾಗಿರುವುದು ತನಿಖೆಯಿಂದ ಹೊರ ಬಂದಿದೆ. ಹಾಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಧ್ಯಕ್ಷರು ಹಾಗೂ ಓರ್ವ ಸದಸ್ಯರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕೆಂದು ಟಿ.ಆರ್.ಸಾಗರ್ ಒತ್ತಾಯಿಸಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರುಗೆ ಗ್ರಾ.ಪಂ. ಅಧ್ಯಕ್ಷ ಸತೀಶ್ ಹಾಗೂ ಸದಸ್ಯೆ ಸ್ವರೂಪ ಎಂಬುವರು ನರೇಗಾ ಯೋಜನೆಯಡಿ 7 ಕಾಮಗಾರಿಯ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ತಾನು ಜಿ.ಪಂ.ಗೆ ದೂರು ನೀಡಿದ್ದೆ. ಈ ಹಿನ್ನಲೆಯಲ್ಲಿ ಒಂಬುಡ್ಸ್ ಅಧಿಕಾರಿಗಳು ತನಿಖೆ ನಡೆಸಿದ್ದು, 7 ಕಾಮಗಾರಿ ಪೈಕಿ 2 ಕಾಮಗಾರಿಯಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದೆ. ಉಳಿದ 5 ಕಾಮಗಾರಿಗಳಲ್ಲಿಯೂ ಕೂಡ ಅವ್ಯವಹಾರ ನಡೆಸುವಷ್ಟರಲ್ಲಿ ತನಿಖೆ ಎದುರಾಗಿದ್ದರಿಂದ ಹಣ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಹಣ ದುರುಪಯೋಗ ಪಡಿಸಿಕೊಳ್ಳಲು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿದ ಫೋಟೋಗಳು ಸಾಕ್ಷಿಯಾಗಿ ಸಿಗುತ್ತವೆ. ಈ ಹಿನ್ನಲೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಪಿಡಿಒ ಹಾಗೂ ಸಿಬ್ಬಂದಿಗೆ ದಂಡ ವಿಧಿಸಿದ್ದಲ್ಲದೇ, ದುರುಪಯೋಗ ಪಡಿಸಿಕೊಂಡಿರುವ ಕಾಮಗಾರಿಯ ಹಣವನ್ನು ಸರಕಾರಕ್ಕೆ ವಾಪಾಸು ಕಟ್ಟಲು ಆದೇಶ ಮಾಡಲಾಗಿದೆ ಎಂದು ಹೇಳಿದರು.

ಪಂಚಾಯಿತಿಯಲ್ಲಿ ವಾಸಸ್ಥಳ ದೃಢೀಕರಣ ಸೇರಿದಂತೆ ಇತರೇ ದೃಢೀಕರಣಕ್ಕೆ ಪಿಡಿಒ ಸಹಿ ಹಾಕಬೇಕೆಂಬ ನಿಯಮವಿದ್ದರೂ ಅವುಗಳಿಗೆ ಅಧ್ಯಕ್ಷರೇ ಸಹಿ ಮಾಡುತ್ತಿದ್ದಾರೆ. ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರಿದ್ದರೆ ಅವರ ಪತಿ ಯಾವುದೇ ಕೆಲಸ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲವೆಂಬ ನಿಯಮವಿದೆ. ಅದರೆ ಅಲ್ಲಿರುವ ಮಹಿಳಾ ಸದಸ್ಯೆ ಸ್ವರೂಪ ಎಂಬುವರ ಪತಿ ಪಂಚಾಯಿತಿಗೆ ನಿರಂತರವಾಗಿ ಆಗಮಿಸುತ್ತಾ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿ ಅಭಿವೃದ್ಧಿಯಲ್ಲಿ ಹೆಸರು ಗಳಿಸಿದ್ದ ತರುವೆ ಗ್ರಾ.ಪಂಯು ಇವರ ದುರಾಡಳಿತದಿಂದ ಕೊನೆ ಸ್ಥಾನಕ್ಕೆ ಇಳಿಯುವಂತಾಗಿದೆ. ಹಾಗಾಗಿ ಇವರ ಅಧಿಕಾರ ದುರುಪಯೋಗದ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿ, ಅವರ ಸೇವೆಯಿಂದ ವಜಾಗೊಳಿಸಲು ಆಗ್ರಹಿಸಲಾಗುವುದು ಎಂದು ಹೇಳಿದರು.ಗೋಷ್ಠಿಯಲ್ಲಿ ಸಂಜಯ್ ಕೊಟ್ಟಿಗೆಹಾರ, ಬಿ.ಎನ್.ವಿನಯ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ