ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಅಂಕುಡೊಂಕು ತಿದ್ದುವ ಸಾಧನವಾಗಲಿ: ಸಿಎಂ ಸಿದ್ದರಾಮಯ್ಯ - Mahanayaka

ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಅಂಕುಡೊಂಕು ತಿದ್ದುವ ಸಾಧನವಾಗಲಿ: ಸಿಎಂ ಸಿದ್ದರಾಮಯ್ಯ

bangalore film festival
30/01/2026

ಬೆಂಗಳೂರು: ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಲಿ.  ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆಗೆ ತುತ್ತಾಗಿರುವ ಮಹಿಳೆಯರು, ಹಿಂದುಳಿದವರು, ರೈತ, ದಲಿತ ಸಮುದಾಯಗಳಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಶ್ರಮಿಸಿದಾಗ ಸಿನಿಮಾ ಮಾಧ್ಯಮದ ಆಶಯ ಮತ್ತು ಉದ್ದೇಶ ಈಡೇರಿದಂತಾಗುತ್ತದೆ. ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಈ ಸಾಮಾಜಿಕ‌ ಜವಾಬ್ದಾರಿಯನ್ನು ಕಾಣಲು ಸಾಧ್ಯವಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ”ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,  ವಿಶ್ವದ ಇತರೆ ಸಮಾಜಗಳು ಹಾಗೂ ಇತರೆ ದೇಶಗಳ ಜನಜೀವನ ಮತ್ತು ಸಂಸ್ಕೃತಿ, ಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಾಗಲಿ ಎಂದರು.

ನಾವು ಪ್ರಥಮವಾಗಿ, ಅಂತಿಮವಾಗಿ ಮನುಷ್ಯರು. ನಾವು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮೂಲಕ ಸಮಸಮಾಜ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆ ಚಲನಚಿತ್ರಗಳು ಒಂದು ಮಾಧ್ಯಮ‌ವಾಗಿ ನೆರವಾಗಬೇಕು ಎಂದರು.

ಇತರೆ ದೇಶಗಳಲ್ಲಿ‌ನ‌ ಮಾನವೀಯ ಸಂಬಂಧಗಳು, ಇತರೆ ದೇಶಗಳಲ್ಲಿ ಆಚರಣೆಯಲ್ಲಿರುವ ಸಮಸಮಾಜದ ಆಚರಣೆಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಚಲಚಿತ್ರದಿಂದ ಸಾಧ್ಯವಿದೆ.

ಸಮಾಜಮುಖಿ ಸಿನಿಮಾ ಮಾಡುವವರಿಗೆ, ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಸಿನಿಮಾಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಶೋಷಿತ, ರೈತ, ದಲಿತ, ಹಿಂದುಳಿದವರು ಮತ್ತು ಸಂವಿಧಾನದ ಆಶಯಗಳ‌ ಪರವಾಗಿ ಹೋರಾಡುತ್ತಿದ್ದಾರೆ. ಇವರ ಈ ಸಾಮಾಜಿಕ ಬದ್ಧತೆ ಅಭಿನಂದನೀಯ ಮತ್ತು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಈ ಸಲದ BIFFes ನ ರಾಯಭಾರಿ, ಬಹುಭಾಷಾ ನಟ ಪ್ರಕಾಶ್ ರಾಜ್, ಕಾಂತಾರ ಚಾಪ್ಟರ್ 1 ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಚಿದಾನಂದ ಪಟೇಲ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ