ಕಾವೇರಿ ಸಮಸ್ಯೆ ಪರಿಹಾರಕ್ಕೆ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಲಿ: ಬಸವರಾಜ ಬೊಮ್ಮಾಯಿ - Mahanayaka
9:43 AM Saturday 18 - October 2025

ಕಾವೇರಿ ಸಮಸ್ಯೆ ಪರಿಹಾರಕ್ಕೆ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಲಿ: ಬಸವರಾಜ ಬೊಮ್ಮಾಯಿ

basavaraj bomayi
23/09/2023

ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಲು ಇಂಡಿ ಒಕ್ಕೂಟದ ಮುಖ್ಯಸ್ಥರಾಗಿರುವ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.


Provided by

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಿಜೆಪಿ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಕರಾಳ ಆಡಳಿತ ಇದೆ. ಸರ್ಕಾರಕ್ಕೆ ಜನತೆಗೆ ನೀರು ಕೊಡಲು ಯೋಗ್ಯತೆ ಇಲ್ಲ. ಅಭಿವೃದ್ಧಿ ಸಂಪೂರ್ಣ ನಿಂತಿದೆ. ನೆಲ, ಜಲ ಹಿತ ಕಾಯಲು ಸರ್ಕಾರ ಸಂಪೂರ್ಣ ವಿಫಲವಾವಗಿದೆ. ಕಾವೇರಿ ವಿಚಾರದಲ್ಲಿ ಆರಂಭದಿಂದಲೂ ಎಡವಿದೆ. ಬರುವ ದಿನಗಳಲ್ಲಿ ಕಾವೆರಿ ಕೊಳ್ಳದ ಜನರಿಗೆ ನೀರಿನ ಸಮಸ್ಯೆ ಎದುರಾದರೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

ತಮಿಳುನಾಡು ಹಿತ ಕಾಯಲು ರಾಜ್ಯದ ಹಿತ ಬಲಿ

ಮೊದಲನೇ ಸಿಡಬ್ಲುಎಂಎ ಸಭೆಯಲ್ಲಿ ನಮ್ಮ ಅಧಿಕಾರಿಗಳು ಮಾತನಾಡಲಿಲ್ಲ. ಆಗ ಸುಪ್ರೀಂ ಕೋರ್ಟ್ ಗೆ ಹೋಗಲಿಲ್ಲ. ಎರಡನೇ ಆದೇಶ ಬಂದಾಗ ಸರ್ವಪಕ್ಷ ಸಭೆ ಕರೆದರು. ಆಗ ಸುಪ್ರೀಂ ಕೋರ್ಟ್ ಗೆ ಐಎ ಹಾಕುವಂತೆ ನಾವು ಹೇಳಿದ್ದೇವು ಆದರೆ ಇವರು ಐಎ ಹಾಕದೆ ತಮಿಳುನಾಡಿನ ಐಎ ಆಕ್ಷೇಪ ಹಾಕಿದರು. ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿದ್ದಾರೆ. ಅವರಿಗೆ ಕಾನೂನು ಪ್ರಕಾರ 1.8 ಲಕ್ಷ ಎಕರೆ ಮಾತ್ರ ಬೆಳೆ ಬೆಳೆಯಲು ಅವಕಾಶವಿದ್ದು, ಅಕ್ರಮವಾಗಿ 4 ಲಕ್ಷ ಎಕರೆ ಬೆಳೆ ಬೆಳೆದಿದ್ದಾರೆ. ಇದನ್ನು ನಮ್ಮ ಅಧಿಕಾರಿಗಳು ಸಿಡಬ್ಲುಎಂಎ ಸಭೆಯಲ್ಲಿ ಪ್ರಸ್ತಾಪಿಸಲಿಲ್ಲ‌. ಅದ್ದರಿಂದ ನಮಗೆ ಈ ರೀತಿಯ ಆದೇಶಗಳು ಬರುತ್ತಿವೆ. ತಮಿಳುನಾಡಿನ ರೈತರ ಹಿತ ಕಾಯಬೇಕು ಅಂತ ನಮ್ಮ ನೀರಾವರಿ ಸಚಿವರು ಹೇಳುತ್ತಾರೆ. ಈ ರೀತಿಯ ಮಾತು ಇತಿಹಾಸದಲ್ಲಿ ಯಾರೂ ಹೇಳಿರಲಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ನಗರ ಇಲ್ಲಿಗೆ ವಿಶ್ವದ ಜನ ಬರುತ್ತಾರೆ. ಇಲ್ಲಿ ನೀರು ಕೊಡಲಿಲ್ಲ ಅಂದರೆ ಸರ್ಕಾರಕ್ಕೆ ಮರ್ಯಾದೆ ಇಲ್ಲ.‌ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರು ಅಂತ ಹೇಳುತ್ತಾರೆ. ಬೆಂಗಳೂರಿಗೆ ನೀರು ಕೊಡಲು ಆಗುತ್ತಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ. ಇಂಡಿಯಾ ಅಲೈನ್ಸ್ ಉಳಿಸಿಕೊಳ್ಳಲು ನೀರು ಬಿಡುತ್ತಿದ್ದಾರೆ. ತಮಿಳುನಾಡಿನ ಹಿತ ಕಾಯಲು ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಗೆ ಪತ್ರ ಬರೆಯಿರಿ ಅಂದರೆ ಅದನ್ನು ಮಾಡಲು ಸಿದ್ದರಿಲ್ಲ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಬೇಕು. ಎರಡು ರಾಜ್ಯಗಳ ಸಿಎಂ ಕರೆಯಿಸಿ ಮಾತುಕತೆ ನಡೆಸಿ ಬಗೆ ಹರಿಸಬೇಕು. ಸೋನಿಯಾ ಗಾಂಧಿ ಇಂಡಿ ಒಕ್ಕೂಟದ ಮುಖ್ಯಸ್ಥರಾಗಿರುವುದರಿಂದ ರಾಜಕಿಯ ಅಧಿಕಾರ ಇದೆ ಎಂದು ಹೇಳಿದರು.

ಈ ಸರ್ಕಾರದ ವಿರುದ್ದ ಈ ಪ್ರತಿಭಟನೆ ಅಗತ್ಯವಿತ್ತು ಬೆಂಗಳೂರಿನಲ್ಲಿ ನಮ್ಮವರು ಹೆಚ್ಚು ಶಾಸಕರಿದ್ದಾರೆ. ನಾವು ಇಲ್ಲಿ ಪ್ರತಿಪಕ್ಷವಲ್ಲ ಒಂದು ರಾಷ್ಟ್ರೀಯ ಪಕ್ಷವಾಗಿ ನಮ್ಮ ಜವಾಬ್ದಾರಿ ಇದೆ. ಮಂಡ್ಯ, ಮೈಸೂರು ಭಾಗದ ರೈತರಿಗೆ ನೀರು ಬಿಡದೆ ಬೆಳೆ ಒಣಗಿದೆ ಅವರಿಗೆ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು. ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾವೇರಿ ಹೋರಾಟ ಉಗ್ರವಾಗಿ ನಡೆಯಲಿದೆ ಎಂದು ಹೇಳಿದರು.
ಕಾವೇರಿ ನೀರಿಗಾಗಿ ರೈತರು ಮತ್ತು ಸಂಘಟನೆಗಳು ನಡೆಸುವ ಹೋರಾಟಗಳಿಗೆ ಬಿಜೆಪಿಯ ಸಂಪೂರ್ಣ ಬೆಂಬಲ‌ ಇದೆ ಎಂದು ಹೇಳಿದರು. ಪ್ರತಿಭಟನಾ ನಿರತ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ನಾಯಕರನ್ನು ಪೊಲಿಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಇತ್ತೀಚಿನ ಸುದ್ದಿ