ಲಿವ್–ಇನ್ ರಿಲೇಶನ್ ಶಿಪ್ ಕಾನೂನುಬಾಹಿರವಲ್ಲ; ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಲಖನೌ: ಲಿವ್–ಇನ್ ರಿಲೇಶನ್ ಶಿಪ್ ನಲ್ಲಿರುವ (ಸಹಜೀವನ) ದಂಪತಿಗಳ ರಕ್ಷಣೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಲಿವ್-ಇನ್ ರಿಲೇಶನ್ ಶಿಪ್ ಕಾನೂನುಬಾಹಿರವಲ್ಲ ಅಥವಾ ಮದುವೆಯ ಪವಿತ್ರ ಬಂಧವಿಲ್ಲದೆ ಒಟ್ಟಿಗೆ ವಾಸಿಸುವುದು ಅಪರಾಧವಲ್ಲ” ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ರಕ್ಷಣೆ ಕೋರಿ 12 ಮಹಿಳೆಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ನ್ಯಾಯಾಲಯದ ಪ್ರಮುಖ ಅಂಶಗಳು:
ವ್ಯಕ್ತಿಯು ವಿವಾಹಿತನಾಗಿರಲಿ ಅಥವಾ ಇಲ್ಲದಿರಲಿ, ಸಂವಿಧಾನ ನೀಡಿರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನಿಂದ ಅವರನ್ನು ವಂಚಿಸುವಂತಿಲ್ಲ. ಪ್ರತಿಯೊಬ್ಬ ಪ್ರಜೆಯ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ದಂಪತಿಗಳ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುವುದು ಅಗತ್ಯ.ಲಿವ್–ಇನ್ ಸಂಬಂಧಗಳು ಸಮಾಜದಲ್ಲಿ ಇಂದಿಗೂ ಟೀಕೆಗೆ ಗುರಿಯಾಗಬಹುದು ಅಥವಾ ಕೆಲವರಿಗೆ ನೈತಿಕವಾಗಿ ಸರಿ ಎನಿಸದಿರಬಹುದು. ಆದರೆ, ಕಾನೂನಿನ ದೃಷ್ಟಿಯಲ್ಲಿ ಇದು ಅಪರಾಧವಲ್ಲ. ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸಿದರೆ, ಅದರಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಹಕ್ಕಿಲ್ಲ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, “ಇಂತಹ ಸಂಬಂಧಗಳು ದೇಶದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುತ್ತವೆ” ಎಂದು ವಾದಿಸಿದ್ದರು. ಆದರೆ ಇದನ್ನು ತಳ್ಳಿಹಾಕಿದ ನ್ಯಾಯಾಲಯವು, ಅರ್ಜಿದಾರರು ವಯಸ್ಕರಾಗಿದ್ದರೆ ಮತ್ತು ಯಾವುದೇ ಅಪರಾಧ ಎಸಗಿರದಿದ್ದರೆ ಅವರಿಗೆ ತಕ್ಷಣದ ಪೊಲೀಸ್ ರಕ್ಷಣೆ ನೀಡುವಂತೆ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























