ಸ್ಥಳೀಯ ಸಂಸ್ಥೆ ಚುನಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಶಿಫಾರಸು! - Mahanayaka
7:51 PM Thursday 4 - September 2025

ಸ್ಥಳೀಯ ಸಂಸ್ಥೆ ಚುನಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಶಿಫಾರಸು!

ballot paper
04/09/2025


Provided by

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್, ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಶಿಫಾರಸು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್ ಅವರು, ಸ್ಥಳೀಯ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು, ಅಗತ್ಯ ಪರಿಷ್ಕರಣೆ ಮಾಡಲು, ಅಗತ್ಯ ಕಾನೂನು ಮತ್ತು ನಿಯಮಾವಳಿ ಬದಲಾವಣೆ ಮಾಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಣಯ ಮಾಡಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ಮಾಡುವುದಕ್ಕೆ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದಕ್ಕೆ ಕೆಲವು ತಿದ್ದುಪಡಿಗಳು ಮತ್ತು ನಿಯಮಾವಳಿಗಳು ಬೇಕಾಗುತ್ತವೆ‌. ಅಗತ್ಯ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಇತ್ತೀಚೆಗೆ ರಾಜ್ಯದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿ ವ್ಯತ್ಯಾಸಗಳಾಗಿದ್ದವು. ಮತಗಳ್ಳತನ ಆರೋಪಗಳು ಕೇಳಿಬಂದಿವೆ. ಜೊತೆಗೆ ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿಯ ಆಧಾರದ ಮೇಲೆ ಈ ತೀರ್ಮಾನ ಮಾಡಲಾಗಿದೆ. ಹಾಗಾಗಿ, ಅಗತ್ಯ ಕಾನೂನು ತಿದ್ದುಪಡಿ‌ ತರಲು ಮತ್ತು ನಿಯಮಾವಳಿ ರಚನೆ ಮಾಡಲು ಶಿಫಾರಸ್ಸಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ನಾವು ದೇಸಾಯಿ ಆಯೋಗ ರಚಿಸಿದ್ದೆವು. ವರದಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕುಟುಂಬದ ಮೇಲೆ ಯಾವುದೇ ಆರೋಪವಿಲ್ಲ. ಅದನ್ನು ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ. ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಇದರ ಬಗ್ಗೆ ಸಂಪುಟ ಸಭೆ ಒಪ್ಪಿಕೊಂಡಿದೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ