ಜಾತಿಗಾಗಿ ಪ್ರಿಯಕರನನ್ನು ಕೊಂದ ತಂದೆ, ಸಹೋದರರು: ಶವವನ್ನೇ ವರಿಸಿ ‘ಪ್ರೀತಿ ಅಮರ’ ಎಂದ ಯುವತಿ - Mahanayaka

ಜಾತಿಗಾಗಿ ಪ್ರಿಯಕರನನ್ನು ಕೊಂದ ತಂದೆ, ಸಹೋದರರು: ಶವವನ್ನೇ ವರಿಸಿ ‘ಪ್ರೀತಿ ಅಮರ’ ಎಂದ ಯುವತಿ

love lives
01/12/2025

ನಾಂದೇಡ್(ಮಹಾರಾಷ್ಟ್ರ): ಜಾತಿಯ ಕಾರಣಕ್ಕಾಗಿ ಮಗಳ ಪ್ರಿಯಕರನನ್ನು ತಂದೆ ಹಾಗೂ ಸಹೋದರರು ಬರ್ಬರವಾಗಿ ಹತ್ಯೆ ಮಾಡಿದರು. ಆದರೆ ತಂದೆ ಹಾಗೂ ಕುಟುಂಬಸ್ಥರ ಜಾತಿ ಪೀಡಿತ ಮನಸ್ಥಿತಿಯನ್ನು ಗೆಲ್ಲಲು ಬಿಡದ ಮಗಳು, ತನ್ನ ಪ್ರಿಯಕರನ ಶವವನ್ನು ಮದುವೆಯಾಗುವ ಮೂಲಕ ಸಮಾಜದಲ್ಲಿ ಸಂಚಲನ ಮೂಡಿಸಿದ್ದಾಳೆ.

ಇದ್ಯಾವುದೋ ಸಿನಿಮಾದ ಕಥೆಯಲ್ಲ, ಮಹಾರಾಷ್ಟ್ರದ ನಾಂದೇಡ್‌ ನಲ್ಲಿ ನಡೆದ ಘಟನೆಯಿದು. ಅಂಚಲ್ ಮಾಮಿಡ್ವಾರ್ (21) ಎಂಬ ಗಟ್ಟಿಗಿತ್ತಿ ಯುವತಿ, ತನ್ನ ಪ್ರಿಯಕರನನ್ನು ಕೊಂದ ತಂದೆ ಹಾಗೂ ಸಹೋದರರಿಗೆ ಸೆಡ್ಡು ಹೊಡೆದು, ಪ್ರಿಯಕರ ಸಕ್ಷಮ್ ತಾಟೆ (20)ಯ ಶವವನ್ನೇ ವಿವಾಹವಾಗಿ, ತಾನು ಆತನ ಮನೆಯಲ್ಲಿ ಸೊಸೆಯಾಗಿ ಬಾಳುವುದಾಗಿ ತಿಳಿಸಿದ್ದಾಳೆ. ಅಲ್ಲದೇ ತನ್ನ ಪ್ರಿಯಕರನನ್ನು ಕೊಂದ ತಂದೆ ಹಾಗೂ ಸಹೋದರರಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾಳೆ.

ನಗರದ ಓಲ್ಡ್ ಗಂಜ್ ಪ್ರದೇಶದಲ್ಲಿ ಸಕ್ಷಮ್ ತಾಟೆ ಗುರುವಾರ ಸಂಜೆ ತನ್ನ ಗೆಳೆಯರೊಂದಿಗೆ ನಿಂತಿದ್ದಾಗ ಅಂಚಲ್‌ ನ ಸಹೋದರ ಹಿಮೇಶ್ ಮಾಮಿಡ್ವಾ‌ ಜಗಳ ತೆಗೆದು ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಸ್ಥಳದಲ್ಲೇ ತಾಟೆ ಮೃತಪಟ್ಟಿದ್ದು, ಹಿಮೇಶ್, ಆತನ ಸಹೋದರ ಸಾಹಿಲ್ ಹಾಗೂ ಅವರ ತಂದೆ ಗಜಾನನ ಮಾಮಿಡ್ವಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಕ್ಷಮ್‌ ನ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ಶುಕ್ರವಾರ ಸಂಜೆ ಆತನ ಮನೆಯಲ್ಲೇ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಆಂಚಲ್, ನನ್ನ ಪ್ರೀತಿ ಅಮರವಾದುದು. ನಾನು ಎಂದೆಂದೂ ತಾಟೆಯ ಪತ್ನಿ ಎಂದು ಹೇಳಿಕೊಂಡು, ಆತನ ಶವವನ್ನೇ ವಿವಾಹವಾದಳು

ಕಳೆದ ಮೂರು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಆದರೆ ಜಾತಿ ಪೀಡಿತ ಮನಸ್ಥಿತಿಯ ಕಾರಣ  ಯುವತಿಯ ಮನೆಯವರು, ಆತನ ಒಡನಾಡವನ್ನು ವಿರೋಧಿಸಿದ್ದರು. ದೂರವಾಗದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರು. ಕೊನೆಗೆ ಅದರಂತೆ ಮಾಡಿದ್ದಾರೆ. ಜಾತಿ ಎನ್ನುವುದು ಸಂಪ್ರದಾಯದ ಹೆಸರಿನ ಅಸಮಾನತೆಯ ಕೂಟವಾಗಿ ವಿಜ್ರಂಬಿಸುತ್ತಿದ್ದರೆ, ಜಾತಿ ಪೀಡಿತ ಮನಸ್ಥಿತಿಗಳಿಗೆ ಅಂಚಲ್ ಮಾಮಿಡ್ವಾರ್ ಸೆಡ್ಡು ಹೊಡೆದು, ತನ್ನ ಪ್ರಿಯಕರನ ಶವವನ್ನೇ ವರಿಸಿದ್ದಾಳೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ