ರಕ್ಷಿಸಬೇಕಾದ ತಂದೆಯೇ ತನ್ನ ಸ್ವಂತ ಮಗಳ ಮೇಲೆಯೇ ಎಂತಹ ಕ್ರೌರ್ಯ ಮೆರೆದಿದ್ದಾನೆ ನೋಡಿ
ರಾಯಚೂರು: ಇಂತಹ ಅಪ್ಪಂದಿರು ಇರುತ್ತಾರಾ? ತಮ್ಮ ಮಕ್ಕಳಿಗೆ ರಕ್ಷಣೆ ನೀಡಬೇಕಾದವರೇ ಅವರನ್ನು ಹಿಸುಕಿ ಹಾಕುವಂತಹ ಕೆಲಸಕ್ಕೆ ಕೈ ಹಾಕುತ್ತಾರಾ? ಈ ಎಲ್ಲ ಪ್ರಶ್ನೆಗಳು ರಾಯಚೂರಿನ ಲಿಂಗಸಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದ ಈ ಅಮಾನವೀಯ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.
ಮಗಳು ಪಾತ್ರೆ ತೊಳೆಯುತ್ತಿದ್ದ ವೇಳೆ ಬಂದ ತಂದೆ ಕೊಡಲಿಯನ್ನು ಮಗಳ ಮೇಲೆ ಮನಸೋ ಇಚ್ಛೆ ಬೀಸಿ ಹತ್ಯೆ ಮಾಡಿದ್ದು, ತಂದೆಯ ಕ್ರೂರತನದಿಂದಾಗಿ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
14 ವರ್ಷದ ಮೋನಮ್. ತನ್ನ ನೀಚ ತಂದೆಯಿಂದಲೇ ಹತ್ಯೆಗೀಡಾದ ಬಾಲಕಿಯಾಗಿದ್ದಾಳೆ. ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಬಾಲಕಿಯ ತಂದೆ ತಿಮ್ಮಯ್ಯ ತನ್ನ ಸ್ವಂತ ಮಗಳನ್ನೇ ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದ ದುಷ್ಟನಾಗಿದ್ದಾನೆ.
ಮಗಳು ತಾನು ಹೇಳಿದ ಹಾಗೆ ಕೇಳುತ್ತಿಲ್ಲ ಎಂಬ ಕಾರಣಕ್ಕಾಗಿ ಮಗಳನ್ನು ಭೀಕರವಾಗಿ ಆರೋಪಿ ತಿಮ್ಮಯ್ಯ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಪುತ್ರಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಘಟನೆ ಸಂಬಂಧ ಆರೋಪಿ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ತಿಮ್ಮಯ್ಯನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


























