ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕ ಸೌರಭ್ ಚಂದ್ರಕರ್ ದುಬೈನಲ್ಲಿ ಬಂಧನ: ಹೊಸ ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ

ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಗೆ ಸಂಬಂಧಿಸಿದ ಬಹುಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೀಘ್ರದಲ್ಲೇ ಹೊಸ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಇಂಟರ್ ಪೋಲ್ ಹೊರಡಿಸಿದ ರೆಡ್ ನೋಟಿಸ್ ಆಧಾರದ ಮೇಲೆ ಅಪ್ಲಿಕೇಶನ್ ನ ಇಬ್ಬರು ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರನ್ನು ದುಬೈನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಆನ್ ಲೈನ್ ಅಪ್ಲಿಕೇಶನ್‌ಗಳ ಮೂಲಕ ಅಕ್ರಮ ಬೆಟ್ಟಿಂಗ್ ಮತ್ತು ಗೇಮಿಂಗ್ ದಂಧೆ ನಡೆಸುತ್ತಿರುವ ಆರೋಪ ಹೊತ್ತಿರುವ ಚಂದ್ರಕರ್ ಮತ್ತು ಉಪ್ಪಲ್ ಅವರನ್ನು ದುಬೈನಲ್ಲಿ ಗೃಹಬಂಧನದಲ್ಲಿರಿಸಲಾಗಿದೆ ಮತ್ತು ಅವರನ್ನು ಗಡೀಪಾರು ಮಾಡಲು ಭಾರತೀಯ ಏಜೆನ್ಸಿಗಳು ರಾಜತಾಂತ್ರಿಕ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ. ದುಬೈನಲ್ಲಿರುವ ಚಂದ್ರಕರ್ ಇರುವ ಸ್ಥಳವನ್ನು ಫೆಡರಲ್ ಏಜೆನ್ಸಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ನವೆಂಬರ್ ನಲ್ಲಿ ಛತ್ತೀಸ್ ಗಢದಿಂದ ಬಂಧಿಸಲ್ಪಟ್ಟ ಇಬ್ಬರು ವ್ಯಕ್ತಿಗಳಾದ ಕ್ಯಾಶ್ ಕೊರಿಯರ್ ಅಸಿಮ್ ದಾಸ್ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಭೀಮ್ ಯಾದವ್ ವಿರುದ್ಧ ಜಾರಿ ನಿರ್ದೇಶನಾಲಯ ಪೂರಕ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆಯಿದೆ. ಚಂದ್ರಕರ್, ಉಪ್ಪಲ್ ಮತ್ತು ಇತರರ ವಿರುದ್ಧ ಸಿಬಿಐ ಈ ಹಿಂದೆ ರಾಯ್ಪುರದ ವಿಶೇಷ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.