Mahanayaka News Impact: ಗೋಲ್ಡನ್ ಸ್ಟಾರ್ ಗಣೇಶ್ ಗೆ ನೋಟಿಸ್– ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಸೂಚನೆ
 
	
	
	
	
	
ಚಾಮರಾಜನಗರ: ಮನೆ ನಿರ್ಮಾಣದ ಉದ್ದೇಶದಿಂದ ಬಂಡಿಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ ಬೃಹತ್ ಗಾತ್ರದ ಕಟ್ಟಡಕ್ಕೆ ಅಡಿಪಾಯ ಹಾಕಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಮಹಾನಾಯಕ.ಇನ್ ವರದಿ ಬೆನ್ನಲ್ಲೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಬಂಡಿಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದು, ಮುಂದಿನ ಏಳು ದಿನಗಳ ಒಳಗೆ ಸೂಕ್ತ ದಾಖಲಾತಿ ಒದಗಿಸಬೇಕು ಹಾಗೂ ಅಲ್ಲಿವರೆಗೆ ಕಾಮಗಾರಿ ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಬಂಡಿಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಜಕ್ಕಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ ನಟ ಗಣೇಶ್ ಸ್ವಂತ ವಾಸಕ್ಕೆ ಮನೆ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕುರಿತು ಹೇಳಿದ್ದರು.
ಅರಣ್ಯ ಅಧಿಕಾರಿಗಳು 2022ರ ಜೂನ್ ನಲ್ಲಿ ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಅನುಮತಿ ನೀಡಿದ್ದರು. ಆದರೆ ಈಗ ಆ ಜಾಗದಲ್ಲಿ ಜೆಸಿಬಿ ಮೂಲಕ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದ್ದು, ರೆಸಾರ್ಟ್ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆ ರೀತಿಯ ಕಟ್ಟಡಕ್ಕೆ ಅವಕಾಶವಿಲ್ಲ.
ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮುಚ್ಚಳಿಕೆ ಪತ್ರ, ಕಂದಾಯ ದಾಖಲಾತಿ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಏಳು ದಿನಗಳ ಒಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲಿವರೆಗೆ ಕೆಲಸ ನಿಲ್ಲಿಸುವಂತೆಯೂ ಹೇಳಲಾಗಿದೆ.






 
 























