ಮಹೇಶ್ ಶೆಟ್ಟಿ ತಿಮರೋಡಿ ಬಂಧನ: ಬಿಜೆಪಿ—ಕಾಂಗ್ರೆಸ್ ಸಮಾನ ಮನಸ್ಕ, ಸಮ್ಮಿಶ್ರ ಸರ್ಕಾರವೇ?

ಹಿಂದೂ ನಾಯಕ, ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ನಿನ್ನೆ(ಆ.21)ರಂದು ಆತುರಾತುರವಾಗಿ ಪೊಲೀಸರು ಬಂಧಿಸಿರುವ ಘಟನೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಬೇಕು ಅಂತ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ವಿಧಾನ ಸಭೆಯಲ್ಲಿ ಗೃಹ ಸಚಿವರ ಮೇಲೆ ಒತ್ತಡ ಹಾಕಿದ ಕೆಲವೇ ದಿನಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನ ಆತುರಾತುರವಾಗಿ ಉಡುಪಿಯ ಬ್ರಹ್ಮಾವರದ ಪೊಲೀಸರು ತಿಮರೋಡಿ ಅವರ ಬೆಳ್ತಂಗಡಿ ನಿವಾಸಕ್ಕೆ ಆಗಮಿಸಿ ಬಂಧಿಸಿದ್ದಾರೆ. ಇದಕ್ಕೂ ಕೆಲವು ದಿನಗಳ ಹಿಂದೆ ವಿಧಾನ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿಚಾರವನ್ನು ಪ್ರಸ್ತಾಪಿಸಿದ್ದ ಬಿಜೆಪಿ, ಸಿಎಂ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ 24 ಕೊಲೆಗಳನ್ನು ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಅದೇ ಸಮಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೌದು.. ನಾನೂ ನೋಡಿದ್ದೇನೆ, ಜೊತೆಗೆ ನಿಮ್ಮ(ಬಿಜೆಪಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬಗ್ಗೆಯೂ ಮಾತನಾಡಿದ್ದಾರೆ, ನನ್ನ ಮೊಬೈಲ್ ನಲ್ಲಿದೆ ಅಂತ ಹೇಳಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ತಕ್ಷಣವೇ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಸೂಚನೆ ನೀಡುವುದಾಗಿ ಸದನಕ್ಕೆ ಉತ್ತರಿಸಿದರು. “ನೀನು ಅತ್ತಂತೆ ನಟಿಸು, ನಾನು ಹೊಡೆದಂತೆ ನಟಿಸುತ್ತೇನೆ” ಎನ್ನುವ ಡ್ರಾಮಾದಂತೆ ಈ ಎಲ್ಲ ಘಟನೆಗಳು ನಡೆದವು. ಸಿಎಂ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದಿರುವುದು ಸುಳ್ಳು ಎಂದು ಸಾಬೀತಾದ ಬೆನ್ನಲ್ಲೇ ಬಿ.ಎಲ್.ಸಂತೋಷ್ ವಿರುದ್ಧದ ಹೇಳಿಕೆಯಲ್ಲಿ ತಿಮರೋಡಿ ಅವರನ್ನ ಬಂಧಿಸಲಾಗಿದೆ. ಒಟ್ಟಿನಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ಒಗ್ಗಟ್ಟಿನ ನಿರ್ಧಾರ ಅದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಹೇಗಾದರೂ ಬಂಧಿಸಬೇಕು ಎನ್ನುವುದಷ್ಟೇ ಎನ್ನುವುದು ಇದೀಗ ಸಾಬೀತಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಆತುರಾತುರವಾಗಿ ಬಂಧಿಸಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಕಡಿಯಿರಿ, ಕೊಲ್ಲಿರಿ” ಎಂಬಂತಹ ಹೇಳಿಕೆ ನೀಡಿದವರ ವಿರುದ್ಧವೂ ಇಷ್ಟೊಂದು ಕ್ಷಿಪ್ರವಾಗಿ ಕ್ರಮಕೈಗೊಂಡಿಲ್ಲ. ಸಿಎಂ 24 ಕೊಲೆ ಮಾಡಿಸಿದ್ದಾರೆ ಅಂತ ಹೇಳಿಕೆ ಕೊಟ್ಟ ಹರೀಶ್ ಪೂಂಜಾ ಅವರನ್ನು ಸರ್ಕಾರ ಇನ್ನೂ ಬಂಧಿಸಿಲ್ಲ. ಅಷ್ಟೇ ಏಕೆ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯ ನಾಯಕರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಕೂಡ ಇಷ್ಟೊಂದು ಆತುರಾತುರವಾದ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ, ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನಕ್ಕೆ ಯಾಕಿಷ್ಟೊಂದು ಆತುರ ಅಂತ ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಅಲ್ಲದೇ ವಿಧಾನ ಸಭೆಯಲ್ಲೇ ಮಹೇಶ್ ಶೆಟ್ಟಿ ತಿಮರೋಡಿ ಅವರ ಚಾರಿತ್ರ್ಯವಧೆ ಮಾಡಿ, ಸಿಎಂ ವಿರುದ್ಧ 24 ಕೊಲೆ ಮಾಡಿದ್ದಾರೆ ಅಂತ ಆರೋಪಿಸಿ ಸುಳ್ಳು ವದಂತಿ ಹಬ್ಬಿಸಿದ ಬಿಜೆಪಿ ನಾಯಕರ ವಿರುದ್ಧವೂ ಕ್ರಮಕೈಗೊಂಡಿಲ್ಲ. ಹೀಗಿರುವಾಗ ತಿಮರೋಡಿ ವಿರುದ್ಧ ಇಷ್ಟೊಂದು ಆತುರದ ಕ್ರಮಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿವೆ.
ಇನ್ನೊಂದು ಮುಖ್ಯ ವಿಚಾರ ಎಂದರೆ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬಿ.ಎಲ್.ಸಂತೋಷ್ ನೇರವಾಗಿ ದೂರು ನೀಡಿಲ್ಲ, ಹಾಗಿದ್ದರೂ ಇಷ್ಟೊಂದು ಆತುರದ ಕ್ರಮಕೈಗೊಂಡಿದ್ದು ಹೇಗೆ? ಹಾಗಿದ್ರೆ ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರ ಮೂಗಿನ ನೇರಕ್ಕೆ ನಿಂತು ಕ್ರಮಕೈಗಳನ್ನ ಕೈಗೊಳ್ತಿದೆಯಾ? ಹಿಂದೂಗಳ ಹೆಸರಿನಲ್ಲಿ ಓಟು ಕೇಳುವ ಬಿಜೆಪಿಯನ್ನ ಮಹೇಶ್ ಶೆಟ್ಟಿ ತಿಮರೋಡಿ ಅಧಿಕಾರದಿಂದಲೇ ಪ್ರಶ್ನೆ ಮಾಡಿದ್ದಾರೆ, ಅವರ ಕೇಳಿದ ರೀತಿ ಹೇಗೆಯೇ ಇರಬಹುದು ಆದರೆ, ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡ್ತೇವೆ ಅಂತ ಹೇಳುವ ಬಿಜೆಪಿ ಈಗ ಯಾರ ಪರವಾಗಿ ನಿಂತಿದೆ ಎನ್ನುವ ಪ್ರಶ್ನೆ ತಪ್ಪೇ? ನಿಮ್ಮ ಮನೆಯ ಹೆಣ್ಣು ಮಕ್ಕಳಾದ್ರೆ, ನೀವು ಸುಮ್ಮನಿರುತ್ತಿದ್ದೀರಾ? ಎನ್ನುವ ಪ್ರಶ್ನೆಗಳು ತಪ್ಪೇ? ತಿಮರೋಡಿಯ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಆಡಳಿತ ಪಕ್ಷ ಕಾಂಗ್ರೆಸ್, ವಿಪಕ್ಷ ಬಿಜೆಪಿ ಒಂದಾಯಿತೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನ ಮಾಡಿದ್ದರೂ, ನಿಂದಿಸಿದರೂ ಇಷ್ಟೊಂದು ವೇಗವಾಗಿ ಕ್ರಮಕೈಗೊಂಡಿರಲಿಕ್ಕಿಲ್ಲ, ಆದ್ರೆ ಇಷ್ಟೊಂದು ಆತುರದಲ್ಲಿ ಬಂಧಿಸಿದ್ದಾರೆಂದಾದರೆ ಇದರ ಹಿಂದೆ ಏನೋ ಷಡ್ಯಂತ್ರವನ್ನ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಸೇರಿಕೊಂಡು ಹೆಣೆಯುತ್ತಿದ್ದಾರೆ, ಬಿಜೆಪಿಯ ಸುಳ್ಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮರುಳಾಗ್ತಿದ್ದಾರೆ. ಇದು ಬಿಜೆಪಿ ಕಾಂಗ್ರೆಸ್ ಸಮಾನ ಮನಸ್ಕರ ಸಮ್ಮಿಶ್ರ ಸರ್ಕಾರವಾ? ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ವಿಧಾನ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ವಾಗ್ದಾಳಿ ನಡೆಸಿದ್ದಾರೆ ಅಂತ ವಿಧಾನ ಸಭೆಯಲ್ಲಿ ಮಾತನಾಡುತ್ತಾರೆ. ಮರುಕ ವ್ಯಕ್ತಪಡಿಸುತ್ತಾರೆ, ಹರೀಶ್ ಪೂಂಜಾ ನೀಡಿರುವ ಹೇಳಿಕೆಯನ್ನ ಮಹೇಶ್ ಶೆಟ್ಟಿ ಹೇಳಿದ್ದಾರೆ ಅಂತ ಹೇಳುತ್ತಾರೆ, ನನ್ನ ಮೊಬೈಲ್ ನಲ್ಲೂ ವಿಡಿಯೋ ಇದೆ ಅಂತಾರೆ… ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿಯ ಸುಳ್ಳನ್ನು ಸರಿಯೋ ತಪ್ಪೋ ಎನ್ನುವುದನ್ನೂ ವಿಮರ್ಶಿಸದೇ ಯಾರದ್ದೋ ಆಣತಿಯ ಮೇರೆಗೆ ಮಾತನಾಡುತ್ತಿದ್ದಾರೆ ಎಂಬಂತೆ ವರ್ತಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಆರಂಭದಿಂದಲೂ ಡಿಕೆಶಿಯ ನಡೆಯನ್ನ ಕರಾವಳಿಯ ಜನ ಪ್ರಶ್ನೆ ಮಾಡಿದ್ದರು. ಈ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಅಂತ ಡಿಕೆಶಿ ಹೇಳಿಕೆ ನೀಡಿದರು. ತಮ್ಮದೇ ಸರ್ಕಾರ ತನಿಖೆ ನಡೆಸುತ್ತಿರುವ ಪ್ರಕರಣವೊಂದರ ಬಗ್ಗೆ ಡಿಕೆಶಿ ಈ ರೀತಿಯ ಹೇಳಿಕೆಯನ್ನು ನೀಡುವುದು ಸರಿಯೇ? ಇದು ನಿಮ್ಮದೇ ಸರ್ಕಾರದ ಮೇಲೆ ನೀವೇ ಗೂಬೆ ಕೂರಿದಂತಲ್ಲವೇ? ಈ ಹೇಳಿಕೆ ನನ್ನ ವೈಯಕ್ತಿಕ ಹೇಳಿಕೆ ಅಂತನೂ ಹೇಳ್ತೀರಿ… ನೀವು ಸರ್ಕಾರದ ವಿರುದ್ಧ ನಿಮ್ಮ ವೈಯಕ್ತಿಕ ಹೇಳಿಕೆ ನೀಡುವುದು ತಪ್ಪಿಲ್ಲ, ಆದ್ರೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಹೇಳಿಕೆ ನೀಡದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಹೇಳಿಕೆ ನೀಡಿದರೆ, ಕಾಂಗ್ರೆಸ್ ಪಕ್ಷಕ್ಕೂ ಗೌರವ, ಸರ್ಕಾರಕ್ಕೂ ಗೌರವ ನಿಮಗೂ ಗೌರವ ನೀಡಿದಂತಾಗುವುದಿಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮಂಗಳೂರು 7 ಗಂಟೆಯ ನಂತರ ಸ್ತಬ್ಧವಾಗುತ್ತದೆ ಅಂತ ನೀವು ಹೇಳುತ್ತೀರಿ, ಕಾನೂನು ಸುವ್ಯವಸ್ಥೆ ವೈಫಲ್ಯ ಇದಕ್ಕೆ ಕಾರಣ ಅಂತ ನಿಮಗೆ ಯಾಕೆ ಅನ್ನಿಸುತ್ತಿಲ್ಲ? ಬಿಜೆಪಿಯ ಸುಳ್ಳಿಗೆ ಸತ್ಯದ ಮುಖವಾಡ ಹಾಕಲು ನೀವು ಕೈಜೋಡಿಸುತ್ತಿದ್ದೀರಾ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಒಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್ ನ ರಾಜಕಾರಣಿಗಳು ಯಾರದ್ದೋ ಒತ್ತಡದಲ್ಲಿದ್ದಾರೆ ಎಂಬಂತೆ ವರ್ತಿಸುತ್ತಿದ್ದಾರೆ. ಸೌಜನ್ಯ ಪರ ಹೋರಾಟದಲ್ಲಿ ಸಮಾಜದ ಮುಂಚೂಣಿ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನ ಬಗ್ಗು ಬಡಿಯಲು, ರಾಜಕಾರಣಿಗಳೆಲ್ಲ, ಆಡಳಿತ ಪಕ್ಷ, ವಿಪಕ್ಷ ಸೇರಿದಂತೆ ಎಲ್ಲರೂ ಸೇರಿ ತಿಮರೋಡಿಯನ್ನ ಜೈಲಿಗೆ ಕಳುಹಿಸಿದ್ದಾರೆ ಅಂತ ಸಮಾಜ ಮಾತನಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಗಮನ ಹರಿಸಲಿ, ಪಕ್ಷದ ವಿರುದ್ಧ ಹೇಳಿಕೆ ನೀಡಿದ ಕೆ.ಎನ್.ರಾಜಣ್ಣ ಅವರನ್ನು ಒಂದು ನೋಟಿಸ್ ಕೂಡ ನೀಡದೇ ಸಂಪುಟದಿಂದ ವಜಾ ಗೊಳಿಸಿದ್ದೀರಿ… ಕಾಂಗ್ರೆಸ್ ಸರ್ಕಾರವೇ ರಚಿಸಿದ ಎಸ್ ಐಟಿ ತಂಡದ ತನಿಖೆ ಪೂರ್ಣಗೊಳ್ಳುವ ಮೊದಲೇ, ಸರ್ಕಾರದ ಭಾಗವಾಗಿರುವ ಮತ್ತು ಉಪ ಮುಖ್ಯಮಂತ್ರಿ ಸ್ಥಾನದ ಜವಾವ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಇದರ ಹಿಂದೆ ಷಡ್ಯಂತ್ರ ಇದೆ ಎಂದು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ ಡಿಕೆಶಿ ವಿರುದ್ಧ ಕ್ರಮ ಯಾಕಿಲ್ಲ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್ ಅರ್ಧ ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ, ಇನ್ನರ್ಧ ಕಾಲು ಕಾಂಗ್ರೆಸ್ ನಲ್ಲಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ, ಏನೇ ಇರಲಿ ರಾಜ್ಯ ಸರ್ಕಾರ ಇನ್ನಾದರೂ ಸ್ವಂತಿಕೆಯಿಂದ ನಡೆದುಕೊಳ್ಳಲಿ, ಆತ್ಮವಿಮರ್ಶೆ ನಡೆಸಿಕೊಳ್ಳಲಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಈ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನುವ ನಂಬಿಕೆಯಲ್ಲಿ ಜನರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD