ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತ: ಉದ್ಯಮಿ ಸಾವು

ನವದೆಹಲಿ: ಫರಿದಾಬಾದ್ ನ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
35 ವರ್ಷ ವಯಸ್ಸಿನ ಪಂಕಜ್ ಎಂಬ ವ್ಯಕ್ತಿ ಟ್ರೈಸೆಪ್ಸ್ ಎಕ್ಸ್‌ಟೆನ್ಶನ್ ಅಭ್ಯಾಸ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ಪಂಕಜ್ ಫರಿದಾಬಾದ್ ನ ಸೆಕ್ಟರ್ –8 ನಲ್ಲಿರುವ ಶ್ರೌತಾ ಜಿಮ್ ಮತ್ತು ವೆಲ್ ನೆಸ್ ಕ್ಲಬ್ ಗೆ ಬೆಳಿಗ್ಗೆ 10 ಗಂಟೆಗೆ ಆಗಮಿಸಿದರು. ಅವರು ತಮ್ಮ ದಿನದ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಒಂದು ಕಪ್ ಬ್ಲಾಕ್ ಕಾಫಿ ಸೇವಿಸಿದ್ದಾರೆ.
ಬೆಳಿಗ್ಗೆ 10:20 ಕ್ಕೆ ದಾಖಲಾಗಿರುವ ಮತ್ತೊಂದು ದೃಶ್ಯದಲ್ಲಿ, ಪಂಕಜ್ ಕೇಬಲ್ ಎಳೆದು ಭುಜಗಳಿಗೆ ವ್ಯಾಯಾಮ ಮಾಡುತ್ತಿರುವುದು ಕಂಡುಬರುತ್ತದೆ. ಕೆಲವು ನಿಮಿಷಗಳ ನಂತರ, ಅವರು ಟ್ರೈಸೆಪ್ಸ್ ಎಕ್ಸ್ ಟೆನ್ಶನ್ ಮಾಡಲು ಪ್ರಾರಂಭಿಸುತ್ತಾರೆ. ಈ ವೇಳೆ ಎರಡು ನಿಮಿಷಗಳ ನಂತರ, ಅವರು ಕುಸಿದು ನೆಲಕ್ಕೆ ಬಿದ್ದರು.
ಶಬ್ದ ಕೇಳಿ, ಸಹ ಜಿಮ್ ಸದಸ್ಯರೊಬ್ಬರು ಅವರನ್ನು ಪರೀಕ್ಷಿಸಲು ನಡೆದು ಯಾರಿಗಾದರೂ ಕರೆ ಮಾಡಲು ಹೊರಗೆ ಓಡಿಹೋದರು. ಕ್ರಮೇಣ, ಹೆಚ್ಚಿನ ಜನರು ಒಟ್ಟುಗೂಡಿದರು ಮತ್ತು ಅವರ ಮುಖದ ಮೇಲೆ ನೀರು ಚಿಮುಕಿಸಿ ಅವರನ್ನು ಬದುಕಿಸಲು ಪ್ರಯತ್ನಿಸಿದರು. ಹತ್ತಿರದ ಖಾಸಗಿ ಆಸ್ಪತ್ರೆಯಿಂದ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ ಪಂಕಜ್ ಮೃತಪಟ್ಟಿರುವುದಾಗಿ ಘೋಷಿಸಿತು.
ಪಂಕಜ್ ಅವರ ಜಿಮ್ ತರಬೇತುದಾರ ಪುನೀತ್, ಪಂಕಜ್ ಭಾರೀ ವ್ಯಾಯಾಮ ಮಾಡುತ್ತಿರಲಿಲ್ಲ. ಅವರು 175 ಕೆ.ಜಿ. ತೂಕ ಹೊಂದಿದ್ದರು, ಆದ್ದರಿಂದ ನಾವು ಅವರನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ವೈದ್ಯರನ್ನು ತಕ್ಷಣ ಕರೆಸಲಾಯಿತು ಎಂದು ಪುನೀತ್ ಹೇಳಿದರು.
ಉದ್ಯಮಿಯಾಗಿದ್ದ ಪಂಕಜ್, ಐದು ತಿಂಗಳಿನಿಂದ ಅದೇ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರು. ಆದರೆ ಇದೀಗ ಜಿಮ್ ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: