ಕೆಟ್ಟ ಕುತೂಹಲ!: ಚಿರತೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಹೋಗಿ ಸಿಕ್ಕಿಕೊಂಡ ವ್ಯಕ್ತಿ: 4 ತಾಸು ಅರಚಾಡಿದ್ರೂ ಯಾರೂ ಬರಲಿಲ್ಲ! - Mahanayaka
3:02 AM Tuesday 23 - December 2025

ಕೆಟ್ಟ ಕುತೂಹಲ!: ಚಿರತೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಹೋಗಿ ಸಿಕ್ಕಿಕೊಂಡ ವ್ಯಕ್ತಿ: 4 ತಾಸು ಅರಚಾಡಿದ್ರೂ ಯಾರೂ ಬರಲಿಲ್ಲ!

kitti
23/12/2025

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬ ಸಿಲುಕಿಕೊಂಡ ಅಪರೂಪದ ಘಟನೆ ನಡೆದಿದೆ. ಗ್ರಾಮದ ಕಿಟ್ಟಿ ಎಂಬುವವರೇ ಈ ಪೀಕಲಾಟಕ್ಕೆ ಸಿಲುಕಿದ ವ್ಯಕ್ತಿ.

ಘಟನೆಯ ವಿವರ: ಗಂಗವಾಡಿ ಗ್ರಾಮದ ರೈತ ರಾಮಯ್ಯ ಎಂಬುವವರ ಜಮೀನಿನಲ್ಲಿ ಇತ್ತೀಚೆಗೆ ಚಿರತೆಯೊಂದು ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದಿತ್ತು. ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಗ್ರಾಮದ ಎರಡು ಕಡೆ ಬೋನುಗಳನ್ನು ಇರಿಸಿತ್ತು.

ಸೋಮವಾರ ಬೆಳಿಗ್ಗೆ ಸುಮಾರು 10:30ರ ವೇಳೆಗೆ, ಕಿಟ್ಟಿ ಎಂಬವರು ಕುತೂಹಲದಿಂದ ಬೋನನ್ನು ನೋಡಲು ಹೋಗಿದ್ದಾರೆ. ಬೋನು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಲು ಅವರು ಅದರ ಒಳಗೆ ಹೋಗುತ್ತಿದ್ದಂತೆಯೇ, ಸ್ವಯಂಚಾಲಿತ ಬಾಗಿಲು (Trap door) ಧಡೀರ್ ಎಂದು ಮುಚ್ಚಿಕೊಂಡಿದೆ.  ಕಿಟ್ಟಿ ಅವರ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಯಾರಿಗೂ ಕರೆ ಮಾಡಿ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ. ಬೋನು ಇರಿಸಿದ್ದ ಜಾಗವು ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ಅವರ ಕಿರುಚಾಟ ಯಾರಿಗೂ ಕೇಳಿಸಲಿಲ್ಲ.  ಸುತ್ತಮುತ್ತ ಚಿರತೆ ಭಯವಿದ್ದಿದ್ದರಿಂದ ದನಗಾಹಿಗಳು ಅಥವಾ ರೈತರು ಆ ಭಾಗಕ್ಕೆ ಬರಲು ಹಿಂಜರಿಯುತ್ತಿದ್ದರು.

ಸುಮಾರು ನಾಲ್ಕು ಗಂಟೆಗಳ ಕಾಲ ಬೋನಿನೊಳಗೆ ಬಂಧಿಯಾಗಿದ್ದ ಕಿಟ್ಟಿ ಅವರು ಮಧ್ಯಾಹ್ನ 2:30ರ ಸುಮಾರಿಗೆ ದೂರದಲ್ಲಿ ದನಗಾಹಿಗಳು ಕಾಣಿಸಿಕೊಂಡಾಗ ಜೋರಾಗಿ ಕೂಗಿಕೊಂಡಿದ್ದಾರೆ. ಮೊದಲು ಹೆದರಿದ ಗ್ರಾಮಸ್ಥರು, ಹತ್ತಿರ ಹೋದಾಗ ಬೋನಿನಲ್ಲಿ ಮನುಷ್ಯ ಇರುವುದನ್ನು ಕಂಡು ಆಶ್ಚರ್ಯಕ್ಕೀಡಾದರು. ತಕ್ಷಣವೇ ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿ, ಬೋನಿನ ಬಾಗಿಲು ತೆರೆದು ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ