ಮಂಗಳೂರು | ಗುಂಪು ಹತ್ಯೆ ಪ್ರಕರಣ: ಇನ್ಸ್ ಪೆಕ್ಟರ್ ಶಿವಕುಮಾರ್ ಕೆ.ಆರ್. ಸಹಿತ ಮೂವರು ಪೊಲೀಸರ ಅಮಾನತು

ಮಂಗಳೂರು: ಕೇರಳ ಮೂಲದ ಯುವಕ ಅಶ್ರಫ್ ನನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್ ಕೆ.ಆರ್. ಹಾಗೂ ಹೆಡ್ ಕಾನ್ ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್ ಸ್ಟೇಬಲ್ ಯಲ್ಲಾಲಿಂಗ ಎಂಬವರನ್ನು ಅಮಾನತು ಮಾಡಲಾಗಿದೆ.
ಏಪ್ರಿಲ್ 27ರಂದು ಈ ಘಟನೆ ನಡೆದಿತ್ತು. ಮಂಗಳೂರು ನಗರದ ಹೊರವಲಯದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು, ಈ ಸ್ಥಳಕ್ಕೆ ಹೋಗಿದ್ದ ಕೇರಳ ಮೂಲದ ಅಶ್ರಫ್ ಎಂಬಾತನನ್ನು ಸುಮಾರು 30ಕ್ಕೂ ಅಧಿಕ ಜನರಿದ್ದ ಗುಂಪು ಥಳಿಸಿ ಬರ್ಬರವಾಗಿ ಹತ್ಯೆ ನಡೆಸಿತ್ತು. ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದರೂ, ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು 20 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಅಪರಿಚಿತ ಯುವಕನಿಗೆ ಕ್ರಿಕೆಟ್ ಪಂದ್ಯಾಟದಲ್ಲಿ ಸೇರಿದ ಗುಂಪು ಥಳಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್, ಸಿಬ್ಬಂದಿಗೂ ಮಾಹಿತಿ ಗೊತ್ತಿತ್ತು. ಆದರೆ ಈ ಘಟನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ಲೋಪ ಎಸಗಿದ್ದರು ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: