ಮಂಗಳೂರು: ಆಟೋ ಸ್ಫೋಟಗೊಂಡ ಸ್ಥಳಕ್ಕೆ NIA  ತಂಡ ಆಗಮನ: ಪ್ರಯಾಣಿಕನ ಮೇಲೆ ಅನುಮಾನ - Mahanayaka

ಮಂಗಳೂರು: ಆಟೋ ಸ್ಫೋಟಗೊಂಡ ಸ್ಥಳಕ್ಕೆ NIA  ತಂಡ ಆಗಮನ: ಪ್ರಯಾಣಿಕನ ಮೇಲೆ ಅನುಮಾನ

mangalore auto blast
20/11/2022


Provided by

ಮಂಗಳೂರು: ನಗರದ ಗರೋಡಿ ಸಮೀಪ ನಡೆದಿರುವ ಆಟೋದಲ್ಲಿ ಸ್ಫೋಟವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಥಳಕ್ಕೆ ಎನ್ ಐಎ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ಸ್ಥಳಕ್ಕೆ ಆಗಮಿಸಿದ ಎನ್ ಐಎಯ ನಾಲ್ವರ ತಂಡ ಆಟೋದಲ್ಲಿ ಸ್ಫೋಟಗೊಂಡ ಸ್ಥಳದಲ್ಲಿ‌ ಪರಿಶೀಲನೆ ನಡೆಸಿತು. ಬಳಿಕ ಅಲ್ಲೇ ರಸ್ತೆಯ ಮತ್ತೊಂದೆಡೆ ಆಟೋ‌ರಿಕ್ಷಾವನ್ನು ಇರಿಸಿದ್ದ ಸ್ಥಳಕ್ಕೆ ತೆರಳಿ ಆಟೋವನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ‌.

ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯ ಬಳಿಯಿರುವ ಗರೋಡಿ ಬಳಿ ನಿನ್ನೆ ಸಂಜೆ ವೇಳೆ ಆಟೋದಲ್ಲಿ ನಿಗೂಢ ಸ್ಪೋಟ ನಡೆದಿತ್ತು. ಘಟನೆಯಲ್ಲಿ ಪ್ರಯಾಣಿಕನ ಮೇಲೆ ಅನುಮಾನ ವ್ಯಕ್ತವಾಗಿದೆ. ಆತನ ಬಗ್ಗೆ ಇನ್ನೂ ಸ್ಪಷ್ಟವಾದ ವಾಹಿತಿ ಲಭ್ಯವಾಗಿಲ್ಲ.

ಆತ ಉತ್ತರಭಾರತ ಮೂಲದ ಕಾರ್ಮಿಕನಂತಿದ್ದು, ಆತನ ಬಳಿ ಪ್ರೇಮ್ ರಾಜ್ ಕನೋಗಿ ಎಂಬ ಐಡಿ ಕಾರ್ಡ್ ಪತ್ತೆಯಾಗಿದೆ. ಆತನಲ್ಲಿದ್ದ ಬ್ಯಾಗ್ ಹಾಗೂ ಬಾಕ್ಸ್ ನೊಳಗಡೆಯಿಂದಲೇ ಈ ಸ್ಪೋಟ ಆಗಿದೆ ಎಂದು ಹೇಳಲಾಗಿದೆ. ಸ್ಪೋಟದ ತೀವ್ರತೆಗೆ ರಿಕ್ಷಾದೊಳಗೆ ದಟ್ಟಹೊಗೆ ಕಾಣಿಸಿಕೊಂಡಿತ್ತು. ಅಲ್ಲದೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕನ ದೇಹದ ಅರ್ಧ ಭಾಗದಲ್ಲಿ ಸುಟ್ಟ ಗಾಯವಾಗಿದೆ. ಆಟೋರಿಕ್ಷಾ ಒಳಭಾಗದಲ್ಲಿಯೂ ಹಾನಿಯಾಗಿದೆ.

ಪ್ರಯಾಣಿಕನಲ್ಲಿದ್ದ ಕುಕ್ಕರ್ ನಲ್ಲಿಯೇ ಈ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ತಜ್ಞರು ನಿನ್ನೆಯೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೇ ಸ್ಪೋಟದ ಕಾರಣ ತಿಳಿಯಬೇಕಿದೆ.

ಆಟೋವನ್ನು ನಿನ್ನೆಯಿಂದ ಸ್ಪೋಟ ನಡೆದ ಸ್ಥಳದಲ್ಲಿ ಶಾಮಿಯಾನ ಹಾಕಿ ಭದ್ರಪಡಿಸಲಾಗಿದೆ. ಇದೀಗ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ತಪಾಸಣೆ ನಡೆಸಿದೆ. ಇಂದು ಎಜಿಡಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಆಗಮಿಸಲಿದ್ದು, ಈಗಾಗಲೇ ಅವರು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ