ಎಲ್ ಪಿಜಿ ಸಿಲಿಂಡರ್ ಕೊರತೆ – ಕರಾವಳಿಯಲ್ಲಿ ಹೋಟೆಲ್ ಗಳು ಬಂದ್, ಮೀನುಗಾರಿಕಾ ಬೋಟ್ ಗಳಿಗೂ ಬಿಸಿ
ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ವಾಣಿಜ್ಯ ಬಳಕೆಯ ಎಲ್ ಪಿಜಿ (LPG) ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೋಟೆಲ್ ಉದ್ಯಮ ಮತ್ತು ಮೀನುಗಾರಿಕೆ ವಲಯ ಸಂಕಷ್ಟಕ್ಕೆ ಸಿಲುಕಿದೆ.
ಜಿಲ್ಲೆಯಾದ್ಯಂತ ಕಳೆದ ಎರಡು–ಮೂರು ದಿನಗಳಿಂದ ಹಲವು ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಬೀದಿ ಬದಿಯ ಆಹಾರ ಮಳಿಗೆಗಳು ಗ್ಯಾಸ್ ಕೊರತೆಯಿಂದಾಗಿ ಬಾಗಿಲು ಹಾಕಿವೆ. ಕೆಲವು ಹೋಟೆಲ್ ಗಳು ತಮ್ಮ ಮೆನುವಿನಲ್ಲಿರುವ ಖಾದ್ಯಗಳನ್ನು ಕಡಿತಗೊಳಿಸಿದ್ದರೆ, ಇನ್ನು ಕೆಲವು ಮಧ್ಯಾಹ್ನದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಮಂಗಳೂರಿನ ಧಕ್ಕೆ (ಬಂದರ್) ಪ್ರದೇಶದಲ್ಲಿ ಮೀನುಗಾರಿಕಾ ಬೋಟ್ಗಳಿಗೂ ಅಡುಗೆ ಅನಿಲದ ಸಮಸ್ಯೆ ಬಾಧಿಸುತ್ತಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ಗಳಲ್ಲಿ ಅಡುಗೆಗಾಗಿ ಗ್ಯಾಸ್ ಅನಿವಾರ್ಯವಾಗಿದ್ದು, ಈಗ ಅನಿಲ ಸಿಗದೆ ಮೀನುಗಾರರು ಸೀಮೆಎಣ್ಣೆ ಸ್ಟೌವ್ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಸೀಮೆಎಣ್ಣೆ ಬೆಲೆಯೂ ದುಪ್ಪಟ್ಟಾಗಿರುವುದು ಅವರಿಗೆ ಮತ್ತಷ್ಟು ಹೊರೆಯಾಗಿದೆ.
ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಅನೇಕರು ಹಳೆಯ ಪದ್ಧತಿಯ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕಟ್ಟಿಗೆಗೆ (ಸೌದೆ) ವಿಪರೀತ ಬೇಡಿಕೆ ಬಂದಿದ್ದು, ಸೌದೆ ವ್ಯಾಪಾರಿಗಳಿಗೂ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾಡಳಿತವು ಕೇವಲ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಹಾಸ್ಟೆಲ್ ಗಳಿಗೆ ಮಾತ್ರ ಆದ್ಯತೆ ನೀಡದೆ, ಹೋಟೆಲ್ ಉದ್ಯಮಕ್ಕೂ ಸಮಾನವಾಗಿ ಗ್ಯಾಸ್ ವಿತರಿಸಬೇಕು ಎಂದು ಹೋಟೆಲ್ ಮಾಲಕರ ಸಂಘದ ಮುಖಂಡರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಹೋಟೆಲ್ಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ವಿದೇಶಗಳಿಂದ ಕಂಟೇನರ್ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಮೀನು ರಫ್ತು ಉದ್ಯಮವೂ ಕುಸಿತ ಕಂಡಿದ್ದು, ಕರಾವಳಿಯ ಆರ್ಥಿಕತೆಯ ಮೇಲೆ ಈ ಗ್ಯಾಸ್ ಬಿಕ್ಕಟ್ಟು ದೊಡ್ಡ ಮಟ್ಟದ ಪ್ರಭಾವ ಬೀರಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























