ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಪ್ರತಿಭಟನೆ: 45 ಮಂದಿಗೆ ಗಾಯ, ಶುಕ್ರವಾರದವರೆಗೆ ಶಾಲೆಗಳಿಗೆ ರಜೆ ಘೋಷಣೆ

ಜುಲೈನಲ್ಲಿ ಅಪಹರಣಕ್ಕೊಳಗಾದ ಇಬ್ಬರು ಯುವಕರ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ಅಶ್ರುವಾಯು ಶೆಲ್ ಮತ್ತು ಲಾಠಿ ಪ್ರಹಾರ ನಡೆಸಿದ ಪರಿಣಾಮ ಮಣಿಪುರದ ಇಂಫಾಲ್ ಕಣಿವೆಯಲ್ಲಿ ಒಟ್ಟು 45 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ಶಾಲೆಗಳನ್ನು ಶುಕ್ರವಾರದವರೆಗೆ ಮುಚ್ಚಲಾಗುವುದು. ಇಬ್ಬರು ಯುವಕರ ಶವಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವೇ ಗಂಟೆಗಳ ನಂತರ ಇಂಫಾಲ್ ಮೂಲದ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು.
ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ಒತ್ತಾಯಿಸಿದರು. ಇಂಫಾಲ್ ಪೂರ್ವ ಜಿಲ್ಲೆಯ ಸಂಜೆಂಥಾಂಗ್ ಬಳಿ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಚಿವಾಲಯದ ಕಡೆಗೆ ಮುಂದುವರಿಯುವುದನ್ನು ಭದ್ರತಾ ಪಡೆಗಳು ತಡೆದಾಗ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು. “ಇಬ್ಬರು ಯುವಕರ ಹತ್ಯೆಯನ್ನು ವಿರೋಧಿಸಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಇಂಫಾಲ್ ನಲ್ಲಿ ರ್ಯಾಲಿ ನಡೆಸಿದರು. ವಿದ್ಯಾರ್ಥಿಗಳು ಸಿಎಂ ಸಚಿವಾಲಯದ ಕಡೆಗೆ ಹೋಗುತ್ತಿದ್ದಾಗ, ಭದ್ರತಾ ಸಿಬ್ಬಂದಿ ಅವರನ್ನು ಚದುರಿಸಲು ಕ್ರಮ ಕೈಗೊಂಡರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ದಾಳಿ ವೇಳೆ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು ಇವರನ್ನು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳ ವಿವಿಧ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 31 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 12 ಮಂದಿ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಇಬ್ಬರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಣಿಪುರ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಶುಕ್ರವಾರದವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದೆ.