ಮಂಜೇಶ್ವರ: ಪ್ಲಸ್ ಟು ವಿದ್ಯಾರ್ಥಿನಿ ತಂದೆಯಿಂದಲೇ ಹತ್ಯೆ, ಚೂರಿ ಇರಿತದಿಂದ ಗಾಯಗೊಂಡಿದ್ದ ಸಂಬಂಧಿಯೂ ಸಾವು!

manjeshwar
03/02/2026

ಮಂಜೇಶ್ವರ (ಕಾಸರಗೋಡು): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ನಡೆಸಿದ ಭೀಕರ ಚಾಕು ಇರಿತದ ದಾಳಿಗೆ ಪ್ಲಸ್ ಟು ವಿದ್ಯಾರ್ಥಿನಿ ಮತ್ತು ಆಕೆಯ ಸಂಬಂಧಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.

ಘಟನೆಯ ವಿವರ: ತುಮಿನಾಡು ಹಿಲ್‌ ಟಾಪ್ ನಗರದ ನಿವಾಸಿ ಜುಮೈಲಾ (19) ಸೋಮವಾರ ಮೃತಪಟ್ಟಿದ್ದರೆ, ಆಕೆಯ ತಂದೆ ಉಮ್ಮರ್ ಫಾರೂಕ್ ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿ ಶೇಖುಂಞಿ (53) ಮಂಗಳವಾರ ಮೃತಪಟ್ಟಿದ್ದಾರೆ. ಶೇಖುಂಞಿ ಅವರು ಉಮ್ಮರ್ ಫಾರೂಕ್ ಅವರ ಪತ್ನಿಯ ಸಹೋದರಿಯ ಪತಿಯಾಗಿದ್ದಾರೆ.

ದಾಳಿಗೆ ಕಾರಣ: ಉಮ್ಮರ್ ಫಾರೂಕ್ ಮತ್ತು ಪತ್ನಿ ತಾಹಿರಾ ಅವರ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಸಮಸ್ಯೆಗಳಿದ್ದವು. ಇದರಿಂದಾಗಿ ಜುಮೈಲಾ ಮತ್ತು ಆಕೆಯ ತಾಯಿ ತಾಹಿರಾ ಅವರು ಶೇಖುಂಞಿ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಕರೆಲ್ಲರೂ ಶೇಖುಂಞಿ ಅವರ ಮನೆಯಲ್ಲಿ ಒಟ್ಟುಗೂಡಿದ್ದರು.

ಚರ್ಚೆಯ ಸಮಯದಲ್ಲಿ, ಉಮ್ಮರ್ ಫಾರೂಕ್ ತಾನು ಈ ಹಿಂದೆ ಪತ್ನಿಯ ಹೆಸರಿಗೆ ಬರೆದುಕೊಟ್ಟಿದ್ದ 10 ಸೆಂಟ್ಸ್ ಜಾಗವನ್ನು ಮರಳಿ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಮಗಳ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ಆ ಜಾಗ ಬೇಕೆಂದು ಪತ್ನಿ ಮತ್ತು ಶೇಖುಂಞಿ ವಾದಿಸಿದ್ದರು. ಇದರಿಂದ ಆಕ್ರೋಶಗೊಂಡ ಉಮ್ಮರ್ ಫಾರೂಕ್, ತಾನು ಅಡಗಿಸಿಟ್ಟುಕೊಂಡಿದ್ದ ಚಾಕುವಿನಿಂದ ಮೊದಲು ಶೇಖುಂಞಿ ಅವರ ಮೇಲೆ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಶಾಲೆಯಿಂದ ಮನೆಗೆ ಬಂದ ಮಗಳು ಜುಮೈಲಾ, ಸಂಬಂಧಿಯನ್ನು ರಕ್ಷಿಸಲು ಅಡ್ಡ ಬಂದಾಗ ಉಮ್ಮರ್ ಫಾರೂಕ್ ಆಕೆಯ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜುಮೈಲಾ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರವೇ ಮೃತಪಟ್ಟಿದ್ದರು. ಶೇಖುಂಞಿ ಅವರು ಇಂದು ಸಾವನ್ನಪ್ಪಿದ್ದಾರೆ.

ಆರೋಪಿ ವಶಕ್ಕೆ: ಗಲ್ಫ್‌ನಲ್ಲಿದ್ದ ಉಮ್ಮರ್ ಫಾರೂಕ್ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯ ಎಸಗುವ ಸಮಯದಲ್ಲಿ ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version