ಮರಾಠಿಯಲ್ಲಿ ಮಾತನಾಡದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಎಂಎನ್ ಎಸ್ ಕಾರ್ಯಕರ್ತರು: ವಿಡಿಯೋ ವೈರಲ್

ಮುಂಬೈ: ಮರಾಠಿ ಭಾಷೆಯಲ್ಲಿ ಮಾತನಾಡದ ಹಿಂದಿ ಭಾಷಿಗನ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಕಪಾಳಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಬುಧವಾರ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ ಠಾಕ್ರೆ ಪಕ್ಷದ ಹಲವಾರು ಕಾರ್ಯಕರ್ತರು ಸ್ವೀಟ್ ಅಂಗಡಿ ಮಾಲಿಕನ ಬಳಿ ಮರಾಠಿ ಮಾತನಾಡುವಂತೆ ಹೇಳಿದ್ದಾರೆ. ಆದರೆ, ನಾನು ಯಾಕೆ ಮರಾಠಿ ಮಾತನಾಡಬೇಕು ಎಂದು ಪ್ರಶ್ನಿಸಿದ ವೇಳೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಗಡಿಯ ಕೆಲಸಗಾರ ಬಘಾರಾಮ್, ಎಂಎನ್ ಎಸ್ ಕಾರ್ಯಕರ್ತರು ರಾಲಿ ನಡೆಸುತ್ತಿದ್ದರು. ಕೆಲವರು ಅಂಗಡಿಗೆ ಬಂದು ನೀರಿನ ಬಾಟಲಿ ಕೇಳಿದರು. ನಾನು ನೀರು ಕೊಟ್ಟೆ, ನಂತರ ನೀವು ಎಲ್ಲಿ ವಾಸಿಸುತ್ತೀರಿ ಎಂದು ಅವರು ಪ್ರಶ್ನಿಸಿದರು. ಮಹಾರಾಷ್ಟ್ರದಲ್ಲಿ ಎಂದೆ, ಮಹಾರಾಷ್ಟ್ರದಲ್ಲಿ ವಾಸಿಸುವುದಾದರೆ ಮರಾಠಿಯಲ್ಲಿ ಮಾತನಾಡಿ ಎಂದರು. ಈ ವೇಳೆ ನಾವು ಎಲ್ಲ ಭಾಷೆ ಮಾತನಾಡುತ್ತೇವೆ ಎಂದೆ. ಹೀಗಾಗಿ ಅವರು ನನಗೆ ಹಲ್ಲೆ ನಡೆಸಿದರು ಎಂದು ಅವರು ವಿವರಿಸಿದ್ದಾರೆ.
ಇಂತಹ ಅನುಭವ ನಮಗೆ ಮೊದಲ ಬಾರಿ ಆಗಿದೆ. ನಾವು ಅಗತ್ಯವಿದ್ದಾಗ ಮರಾಠಿಯಲ್ಲಿಯೂ ಮಾತನಾಡುತ್ತೇವೆ ಎಂದು ಬಘರಾಮ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಂಎನ್ ಎಸ್ ನ ಏಳು ಸದಸ್ಯರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ರಾಜ್ ಠಾಕ್ರೆ ನೇತೃತ್ವದ ಪಕ್ಷವು ಮಹಾರಾಷ್ಟ್ರದ ವಾಣಿಜ್ಯ ಸಂಸ್ಥೆಗಳು ಮತ್ತು ಬ್ಯಾಂಕ್ ಗಳಲ್ಲಿ ಮರಾಠಿ ಭಾಷೆಯನ್ನು ಬಳಸುವಂತೆ ಒತ್ತಾಯಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: