ಮನೆಯವರ ಒಪ್ಪಿಗೆ ಇಲ್ಲದೇ ಪ್ರಿಯಕರನನ್ನು ಮದ್ವೆಯಾದ ಯುವತಿ: ಬದುಕಿದ್ದಾಗಲೇ ಕೋಪದಿಂದ ಮಗಳ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು - Mahanayaka
11:35 PM Friday 19 - December 2025

ಮನೆಯವರ ಒಪ್ಪಿಗೆ ಇಲ್ಲದೇ ಪ್ರಿಯಕರನನ್ನು ಮದ್ವೆಯಾದ ಯುವತಿ: ಬದುಕಿದ್ದಾಗಲೇ ಕೋಪದಿಂದ ಮಗಳ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು

08/09/2023

ಆಕೆಗೆ ಬೇಕಿರೋದು ಪ್ರೇಮ. ಇವರಿಗೆ ಬೇಕಾಗಿದ್ದು ಪ್ರತಿಷ್ಟೆ. ಕೊನೆಗೆ ಆಗಿದ್ದು ಏನು..? ಕುಟುಂಬದ ಒಪ್ಪಿಗೆ ಇಲ್ಲದೇ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾಗಿದ್ದೇ ತಪ್ಪು ಎಂದು ಭಾವಿಸಿದ ಆಕೆಯ ಕುಟುಂಬಸ್ಥರು ತಮ್ಮ ಪುತ್ರಿ ಮೃತಪಟ್ಟಿದ್ದಾಳೆ ಎಂದು ಸಾರ್ವಜನಿಕವಾಗಿ ಘೋಷಿಸಿ ಆಕೆಯ ಅಂತಿಮ ಸಂಸ್ಕಾರ ಮಾಡಿದ ಘಟನೆ ಓಡಿಶಾದ ಕೇಂದ್ರಪಾರಾ ಜಿಲ್ಲೆಯ ಔಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದೇಮಲ್ ಗ್ರಾಮದ ಮುನಾ ಮಲ್ಲಿಕ್ ಎಂಬುವವರ ಪುತ್ರಿ ದೀಪಾಂಜಲಿ ಮಲ್ಲಿಕ್ (20) ತನ್ನ ಪ್ರಿಯಕರ ರಾಜೇಂದ್ರ ಮಲ್ಲಿಕ್ (23) ಎಂಬಾತನನ್ನು ಇತ್ತೀಚಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಳು. ಆದರೆ ಈ ಮದುವೆಗೆ ದೀಪಾಂಜಲಿ ಕುಟುಂಸ್ಥರ ವಿರೋಧವಿತ್ತು. ಇದರಿಂದಾಗಿ ಆಕೆಯ ಕುಟುಂಬಸ್ಥರು ತಮ್ಮ ನಿರ್ಧಾರವನ್ನು ಧಿಕ್ಕರಿಸಿದ್ದಕ್ಕೆ ಕೋಪಗೊಂಡು ಅವಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿ ಸಾರ್ವಜನಿಕವಾಗಿ ಅವಳ ಅಂತಿಮ ಸಂಸ್ಕಾರ ಮಾಡಿದ್ದಾರೆ.

ದೀಪಾಂಜಲಿ ತಂದೆ ಮುನಾ ಮಲ್ಲಿಕ್ ಈ ಬಗ್ಗೆ ಮಾತನಾಡಿ, ನಮ್ಮ ಮಗಳು ರಾಜೇಂದ್ರನೊಂದಿಗೆ ಓಡಿಹೋಗಿದ್ದಳು. ನಾವು ಅವನ ವಿರುದ್ಧ ಔಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಪೊಲೀಸರು ಅವಳನ್ನು ಪತ್ತೆಹಚ್ಚಿದ ನಂತರ ನಮ್ಮ ಮಗಳನ್ನು ಹಸ್ತಾಂತರಿಸಿದರು.

ಆದರೆ ದೀಪಾಂಜಲಿ ಕೋಪಗೊಂಡು ಗ್ರಾಮದ ದೇವಸ್ಥಾನದಲ್ಲಿ ರಾಜೇಂದ್ರನನ್ನು ಮದುವೆಯಾದಳು. ಇದರಿಂದ ನಮಗೆ ತೀವ್ರ ನೋವುಂಟಾಯಿತು ಜೊತೆಗೆ ಗೌರವಕ್ಕೂ ಧಕ್ಕೆ ಆಗಿದೆ. ಈ ಹಿನ್ನೆಲೆಯಲ್ಲಿ ದೀಪಾಂಜಲಿಯ ಅಂತಿಮ ಸಂಸ್ಕಾರ ಮಾಡಿ ಎಲ್ಲಾ ಕಾರ್ಯವನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತ ಈ ಕುರಿತು ಪ್ರತಿಕ್ರಿಯೆ ನೀಡಿದ ದೀಪಾಂಜಲಿ, ನನಗೆ ಮದುವೆಯ ವಯಸ್ಸು ಆಗಿದೆ. ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಅಂದಿದ್ದಾಳೆ. ಜೊತೆಗೆ ರಾಜೇಂದ್ರನ ತಂದೆ ಅನಂತ್ ಮಲ್ಲಿಕ್ ಮಾತನಾಡಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನಾವು ದೀಪಾಂಜಲಿಯನ್ನು ಸೊಸೆಯಾಗಿ ಸಂತೋಷದಿಂದ ಸ್ವೀಕರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ