'ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಭೀಕರ ದಾಳಿ: ಇರಾನ್ ವಿರುದ್ಧ ಟ್ರಂಪ್ ಕೆಂಡಾಮಂಡಲ - Mahanayaka

‘ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಭೀಕರ ದಾಳಿ: ಇರಾನ್ ವಿರುದ್ಧ ಟ್ರಂಪ್ ಕೆಂಡಾಮಂಡಲ

05/04/2026

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದು, ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಯಕಟ್ಟಿನ ‘ಹೋರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ತೆರೆಯದಿದ್ದರೆ ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.

ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮುಂಬರುವ ಮಂಗಳವಾರವನ್ನು ಇರಾನ್ ಪಾಲಿನ ಕರಾಳ ದಿನ ಎಂದು ಬಣ್ಣಿಸಿದ್ದಾರೆ.

“ಇರಾನ್‌ ನಲ್ಲಿ ಮಂಗಳವಾರವು ವಿದ್ಯುತ್ ಸ್ಥಾವರಗಳ ದಿನ ಮತ್ತು ಸೇತುವೆಗಳ ದಿನವಾಗಲಿದೆ. ಅಂತಹ ದಾಳಿಯನ್ನು ಜಗತ್ತು ಇದುವರೆಗೆ ನೋಡಿರುವುದಿಲ್ಲ” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಂದರೆ ಇರಾನ್‌ ನ ವಿದ್ಯುತ್ ಕೇಂದ್ರಗಳು ಮತ್ತು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸುವ ಮುನ್ಸೂಚನೆ ನೀಡಿದ್ದಾರೆ.

ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದನ್ನು ಕೂಡಲೇ ತೆರೆಯದಿದ್ದರೆ ಇರಾನ್ “ನರಕ ಸದೃಶ” ಜೀವನ ಅನುಭವಿಸಬೇಕಾಗುತ್ತದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಈ ಹಿಂದೆ ಇರಾನ್‌ ಗೆ 48 ಗಂಟೆಗಳ ಗಡುವು ನೀಡಿದ್ದ ಟ್ರಂಪ್, ಸಮಯ ಮುಗಿಯುತ್ತಾ ಬಂದಿದೆ ಎಂದು ಎಚ್ಚರಿಸಿದ್ದಾರೆ.  ಇತ್ತೀಚೆಗೆ ಇರಾನ್ ಪತನಗೊಳಿಸಿದ್ದ ಅಮೆರಿಕದ ಯುದ್ಧ ವಿಮಾನದ ಪೈಲಟ್ ಅನ್ನು ಅಮೆರಿಕದ ವಿಶೇಷ ಪಡೆಗಳು ಸಾಹಸಿಕವಾಗಿ ರಕ್ಷಿಸಿವೆ. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಆಕ್ರೋಶದ ನುಡಿಗಳು ಹೊರಬಿದ್ದಿವೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದ್ದು, ಫೆಬ್ರವರಿ 28 ರಿಂದ ಯುದ್ಧ ತೀವ್ರಗೊಂಡಿದೆ. ಇರಾನ್‌ನ ಹಿರಿಯ ನಾಯಕರು ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಪ್ರತಿಯಾಗಿ ಇರಾನ್ ಕೂಡ ಅರಬ್ ರಾಷ್ಟ್ರಗಳ ತೈಲ ಕೇಂದ್ರಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ.

ಈ ಬೆಳವಣಿಗೆಯಿಂದಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ