ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆ.21ರಂದು ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಇದು ಯಾರ ವಿರುದ್ಧದ ಪ್ರತಿಭಟನೆ ಅಲ್ಲ ಎಂದ ಸುಮಲತಾ

ಮಂಡ್ಯ: ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 21ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮುಂದೆ ಒಳ್ಳೆಯವರಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀರಿನ ಲಭ್ಯತೆಯನ್ನು ಚರ್ಚೆ ಮಾಡದೇ ನೀರು ಬಿಟ್ಟಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟಕ್ಕೆ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಆಟೋ, ಚಾಲಕರು ಬೆಂಬಲ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಮನವಿ ಮಾಡಿದ್ದಾರೆ.
ಇದು ರಾಜಕೀಯ ಅಲ್ಲ ಎಂದ ಸಂಸದೆ ಸುಮಲತಾ:
ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡಿದ ಮಂಡ್ಯದ ಸಂಸದೆ ಸುಮಲತಾ, ಇದು ರಾಜಕೀಯ ಹೋರಾಟವಲ್ಲ, ರೈತರ ಪರ ನಡೆಯುತ್ತಿರುವ ಹೋರಾಟ, ಎಲ್ಲರನ್ನೂ ಸೇರಿಸಿಕೊಂಡು ರೈತರಿಗಾಗಿ ಹೋರಾಟ ಮಾಡಬೇಕು. ಕರ್ನಾಟಕ ಸರ್ಕಾರದ ತಮಿಳುನಾಡುಪರ ನಿರ್ಧಾರದಿಂದ ನಮ್ಮ ರೈತರಿಗೆ ಅನ್ಯಾಯವಾಗಬಾರದು ಎಂದು ಈ ಹೋರಾಟ ನಡೆಯುತ್ತಿದೆ. ಕಾವೇರಿ ವಿಚಾರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಕಾವೇರಿ ನೀರಿನ ಅವಶ್ಯಕತೆ ಇರುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು, ಸರ್ಕಾರ ಒಳ್ಳೆಯ ಹೆಜ್ಜೆ ಹಾಕಬೇಕು, ಹೀಗೆ ಬಿಟ್ಟರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ನಾವು ಯಾರ ವಿರುದ್ಧವೂ ಹೋರಾಟ ಮಾಡುತಿಲ್ಲ, ರೈತರ ಪರ ಹೋರಾಟ ಮಾಡುತ್ತಿದ್ದೇವೆ ಎಮದು ಅವರು ಹೇಳಿದರು.