ಮಾವಿನ ಹಣ್ಣು ಕದ್ದರೆಂದು ಬಾಲಕರಿಗೆ ಥಳಿಸಿ, ಸೆಗಣಿ ತಿನ್ನಿಸಿದ ದುಷ್ಟರು!
ತೆಲಂಗಾಣ: ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕುತ್ತಾ ಮಾವಿನ ತೋಟವನ್ನು ಪ್ರವೇಶಿಸಿದ ಇಬ್ಬರು ಬಾಲಕರ ಮೇಲೆ ಮಾವಿನ ತೋಟದ ಕಾವಲುಗಾರರು ಅಮಾನವೀಯವಾಗಿ ಥಳಿಸಿ, ಸೆಗಣಿ ತಿನ್ನಿಸಿದ ಘಟನೆ ತೆಲಂಗಾಣದ ಮಹಾಬುಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಥೋರ್ರುರ್ ಪಟ್ಟಣದ ಹೊರವಲಯದಲ್ಲಿರುವ ಬೋಥಾಲಾ ತಾಂಡಾ ಬುಡಕಟ್ಟು ಜನಾಂಗ ವಾಸವಿರುವ ಗ್ರಾಮದ 12 ಮತ್ತು 13 ವರ್ಷದ ಬಾಲಕರಿಬ್ಬರು ತಮ್ಮ ಸಾಕು ನಾಯಿಯನ್ನು ಹುಡುಕುತ್ತಾ ಮಾವಿನ ತೋಟವನ್ನು ಪ್ರವೇಶಿಸಿದ್ದಾರೆ. ಕದಿಯುವು ಉದ್ದೇಶದಿಂದಲೂ ಅವರು ತೋಟವನ್ನು ಪ್ರವೇಶಿಸಿರಲಿಲ್ಲ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಕಾವಲುಗಾರರು ಮಕ್ಕಳನ್ನು ಕನಿಷ್ಠ ಯಾಕೆ ಒಳಗೆ ಬಂದಿದ್ದೀರಿ ಎಂದು ಪ್ರಶ್ನಿಸದೇ ಬಾಲಕರ ಕೈಗೆ ಹಗ್ಗ ಕಟ್ಟಿ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಓರ್ವ ಎಮ್ಮೆಯ ಸೆಗಣಿಯನ್ನು ತಂದು ಓರ್ವ ಬಾಲಕನಿಗೆ ತಿನ್ನಿಸಿದ್ದಾನೆ. ಈ ವೇಳೆ ಇನ್ನೋರ್ವ ಕಾವಲುಗಾರ ಇನ್ನೋರ್ವ ಬಾಲಕನನ್ನು ಸೆಗಣಿ ತಿನ್ನು ಎಂದು ಬೆದರಿಕೆ ಹಾಕುತ್ತಾನೆ. ಈ ಘಟನೆಯನ್ನು ಆರೋಪಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಈ ಅಮಾನವೀಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಇಬ್ಬರು ಕಾವಲುಗಾರರನ್ನು ಪೊಲೀಸರು ಬಂಧಿಸಿದ್ದು, ಶುಕ್ರವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತೋರುರ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚ.ನಾಗೇಶ್ ತಿಳಿಸಿದ್ದಾರೆ.
ಘಟನೆ ಸಂಬಂಧ ತೋಟದ ಕಾವಲುಗಾರರ ಮೇಲೆ ಕಾನೂನು ಬಾಹಿರ ಶಿಕ್ಷೆ, ಅಕ್ರಮ ಬಂಧನ, ಮಾರಕಾಸ್ತ್ರಗಳಿಂದ ದಾಳಿ, ಉದ್ದೇಶ ಪೂರ್ವಕ ಅವಮಾನ ಮತ್ತು ಪ್ರಚೋದನೆ ಮೊದಲಾದ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




























