“ಮೋದಿ ಜೀ, ದೇಶದಲ್ಲಿ ಪಕೋಡ ಮಾರಾಟ ಮಾಡುವುದೂ ಈಗ ಕಷ್ಟ“
ಬೆಂಗಳೂರು: ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎಂದು ಹೇಳಿದ್ದರು. ಆದರೆ ಈಗ ಪಕೋಡ ಮಾರಾಟ ಮಾಡುವುದು ಕೂಡ ಕಷ್ಟಕರವಾಗಿರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಗಮನಿಸಿದರೆ, ಪಕೋಡ ಮಾರಾಟ ಮಾಡುವುದು ಕೂಡ ಸಾಧ್ಯವಿಲ್ಲವೇನೋ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ಸರ್ಕಾರದ ದಯನೀಯ ಆಡಳಿಯ ವೈಫಲ್ಯದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಈ ಸಂಭ್ರಮ ಯಾವ ಕಾರಣಕ್ಕೆ ಗೊತ್ತಿಲ್ಲ. ದೇಶದ ಜಿಡಿಪಿ ಪ್ರಮಾಣ ದಾಖಲೆಯ ಮಟ್ಟಕ್ಕೆ ಕುಸಿತ ಕಂಡು, ದೇಶದ ಎಲ್ಲಾ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಇದರ ಪರಿಣಾಮವಾಗಿ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರ ಬೀಳುವಂತಾಯಿತು ಎಂದು ಅವರು ವಿವರಿಸಿದ್ದಾರೆ.
ಅಧಿಕಾರವನ್ನು ಮುಂದಿನ ಅವಧಿಗೆ ವಿಸ್ತರಿಸುವುದು ಮಾತ್ರವೇ ಬಿಜೆಪಿಯ ಗುರಿಯಾಗಿದ್ದು, ಇದಕ್ಕಾಗಿ, ಇಲ್ಲದ ಹುಚ್ಚಾಟಗಳನ್ನು ಸೃಷ್ಟಿಸುತ್ತಿದೆ. ಇದರಿಂದಾಗಿ ಜನರ ಬದುಕು, ಭವಿಷ್ಯ ನಾಶವಾಗುತ್ತಿದೆ. ರಾಜ್ಯದಲ್ಲಿ ಕೋಮುವಾದಿ ಬಿಜೆಪಿಯ ಕೈಗೆ ಅಧಿಕಾರ ನೀಡಿರುವುದು ಮಂಗನ ಕೈಗೆ ಮಾಣಿಕ್ಯ ನೀಡಿದಂತಾಗಿದೆ ಎಂದು ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.




























