ಮೂರನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಸತಾರ್: ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಮಹಾರಾಷ್ಟ್ರದ ಸತಾರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.
ಹೆರಿಗೆಯಾದ ಮಹಿಳೆ ಮೂಲತಃ ಪುಣೆ ಜಿಲ್ಲೆಯ ಸಾಸ್ವಾದ್ ನವರಾಗಿದ್ದು, ಅವರ ಕುಟುಂಬ ಸತಾರ್ ಜಿಲ್ಲೆಯ ಕೊರೆಗಾಂವ್ ತಾಲೂಕಿನಲ್ಲಿ ಕೆಲಸಕ್ಕಾಗಿ ಬಂದು ವಾಸಿಸುತ್ತಿದ್ದರು. ಇವರು ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯನ್ನು ವೈದ್ಯರು ಪರೀಕ್ಷಿಸಿದ ವೇಳೆ ಮಹಿಳೆಯ ಗರ್ಭದಲ್ಲಿ ನಾಲ್ಕು ಮಕ್ಕಳಿರುವುದು ಕಂಡು ಬಂದಿತ್ತು.
ತಕ್ಷಣವೇ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗಿತ್ತು. ಜನಿಸಿದ ಎಲ್ಲ ನವಜಾತ ಶಿಶುಗಳು 1200ರಿಂದ, 1600 ಗ್ರಾಂ ತೂಕವಿದ್ದು, ಅವುಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ತಾಯಿಗೆ ಕೂಡ ವಿಶೇಷ ಚಿಕಿತ್ಸಾ ವ್ಯವಸ್ಥೆಗಳನ್ನ ಮಾಡಿಸಲಾಗಿದೆ. ಪ್ರಸ್ತುತ ಶಿಶುಗಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.
ಮೂರನೇ ಹೆರಿಗೆ:
ಅಂದ ಹಾಗೆ ಈ ಮಹಿಳೆಗೆ ಇದು ಮೂರನೇ ಹೆರಿಗೆಯಾಗಿದೆ. ಮೊದಲ ಹೆರಿಗೆಯಲ್ಲಿ ಅವಳಿ ಜವಳಿ ಮಕ್ಕಳಾಗಿದ್ದವು. ಎರಡನೇ ಹೆರಿಗೆಯಲ್ಲಿ ಒಂದು ಮಗು ಜನಿಸಿತ್ತು. ಮೂರನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾರೆ.
ಸತಾರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ಮೊದಲ ಬಾರಿಗೆ ನಡೆದಿದೆ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಾ.ಸದಾಶಿವ ದೇಸಾಯಿ, ಡಾ.ತುಷಾರ್ ಮಸ್ರಾಮ್, ಅರಿವಳಿಕೆ ತಜ್ಞ ಡಾ.ನೀಲಂ ಕದಮ್, ಹೆರಿಗೆ ವಿಭಾಗದ ಡಾ. ದೀಪಾಲಿ ರಾಥೋಡ್ ತಂಡ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD