ಓಡಿಹೋಗಿ ಮದುವೆಯಾದರೆ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ: ಈ ಹಳ್ಳಿಯಲ್ಲಿ ವಿಚಿತ್ರ ನಿರ್ಧಾರ!
ರತ್ಲಾಮ್ (ಮಧ್ಯಪ್ರದೇಶ): ದ್ವೇಷಿಸಲು ಯಾವುದೇ ನಿಯಮಗಳಿಲ್ಲ, ಆದ್ರೆ ನಮ್ಮ ದೇಶದಲ್ಲಿ ಪ್ರೀತಿಸಲು ಸಾಲು ಸಾಲು ನಿಯಮಗಳನ್ನು ಕೆಲವು ವಿಕೃತರು ಅಘೋಷಿತವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಪ್ರೇಮ ವಿವಾಹ ಹಾಗೂ ಅಂತರ್ಜಾತಿ ವಿವಾಹಗಳನ್ನು ತಡೆಯುವ ಉದ್ದೇಶದಿಂದ ಮಧ್ಯಪ್ರದೇಶದ ಗ್ರಾಮವೊಂದು ವಿಲಕ್ಷಣ ಮತ್ತು ಕೆಟ್ಟ ನಿರ್ಧಾರ ಕೈಗೊಂಡಿದೆ. ಜಿಲ್ಲೆಯ ಪಿಪ್ಲೋಡಾ ತಹಸಿಲ್ನ ‘ಪಂಚೇವಾ’ ಗ್ರಾಮದಲ್ಲಿ, ಯಾರಾದರೂ ಯುವಕ ಅಥವಾ ಯುವತಿ ಮನೆಯವರ ಸಮ್ಮತಿಯಿಲ್ಲದೆ ಓಡಿಹೋಗಿ ಮದುವೆಯಾದರೆ, ಅಂತಹವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಎಂದು ಗ್ರಾಮ ಪಂಚಾಯತ್ ಘೋಷಿಸಿದೆ.
ಘಟನೆಯ ವಿವರ: ಕಳೆದ ಆರು ತಿಂಗಳಲ್ಲಿ ಗ್ರಾಮದ ಸುಮಾರು 12ಕ್ಕೂ ಹೆಚ್ಚು ಜೋಡಿಗಳು ಮನೆಯವರ ವಿರೋಧದ ನಡುವೆಯೂ ಓಡಿಹೋಗಿ ಮದುವೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮದ ಹಿರಿಯರು ಮತ್ತು ಪಂಚಾಯತ್ ಸದಸ್ಯರು ಇತ್ತೀಚೆಗೆ ಸಭೆ ಸೇರಿ ಈ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಸಭೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗ್ರಾಮದ ಕಠಿಣ ನಿಯಮಗಳು:
- ಆರ್ಥಿಕ ಬಹಿಷ್ಕಾರ: ಓಡಿಹೋಗಿ ಮದುವೆಯಾದವರ ಕುಟುಂಬಕ್ಕೆ ಹಾಲು ಅಥವಾ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸುವಂತಿಲ್ಲ.
- ಕೆಲಸ ನಿಷೇಧ: ಅಂತಹ ಕುಟುಂಬದವರಿಗೆ ಗ್ರಾಮದಲ್ಲಿ ಯಾವುದೇ ಕೆಲಸ ನೀಡಬಾರದು.
- ಸೇವೆಗಳ ಸ್ಥಗಿತ: ಪುರೋಹಿತರು, ಕ್ಷೌರಿಕರು ಸೇರಿದಂತೆ ಯಾವುದೇ ಸೇವೆ ಒದಗಿಸುವವರು ಅಂತಹ ಮನೆಗಳಿಗೆ ಹೋಗಬಾರದು.
- ಸಹಾಯ ಮಾಡುವವರಿಗೂ ಶಿಕ್ಷೆ: ಪ್ರೇಮಿಗಳಿಗೆ ಮದುವೆಯಾಗಲು ಸಹಾಯ ಮಾಡುವವರು ಅಥವಾ ಸಾಕ್ಷಿ ಸಹಿ ಹಾಕುವವರಿಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ವಿಷಯವು ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸ್ಥಳೀಯ ಆಡಳಿತವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಶಾಲಿನಿ ಶ್ರೀವಾಸ್ತವ ಅವರು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಕಾನೂನು ಬಾಹಿರವಾಗಿ ಇಂತಹ ನಿರ್ಧಾರಗಳನ್ನು ಕೈಗೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ‘ಖಾಪ್ ಪಂಚಾಯತ್’ ಮಾದರಿಯ ನಿರ್ಧಾರಗಳು ಸಂವಿಧಾನ ವಿರೋಧಿ ಎಂದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























