ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಕಾದು ಕಾದು ಸ್ವಂತ ಹಣದಲ್ಲಿ ಹಣೆಮಣೆ ಏರಿದ 7 ಜೋಡಿ!!
ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಇನ್ನೂ ಮುಹೂರ್ತ ಕೂಡಿಬರದ ಕಾರಣ ಬೇಸತ್ತ 7 ಜೋಡಿಗಳು ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಹೌದು…, ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿದ ಕಾರಣ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ 7 ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆ. 23 ರಂದು ಸಾಮೂಹಿಕ ವಿವಾಹ ನಿಗದಿಯಾಗಿತ್ತು. ಆದರೆ, ಈ ದಿನಾಂಕ ಮುಂದೂಡಿಕೆಯಾಗಿ ಬಳಿಕ ಆ. 28 ರಂದು ನಿಗದಿಯಾಗಿತ್ತು. ಈಗ ಆ.28 ರ ಸಾಮೂಹಿಕ ವಿವಾಹ ಮತ್ತೆ ಮುಂದೂಡಿಕೆಯಾಗಿದ್ದು ಭಕ್ತರು ಬೇಸರ ಹೊರಹಾಕಿದ್ದಾರೆ.
ಮಲೆಮಾದಪ್ಪನ ಸನ್ನಿಧಿಯಲ್ಲಿ ಮದ್ವೆಯಾದ್ರೆ ಶುಭ ಎಂಬ ನಂಬಿಕೆ ಹಿನ್ನೆಲೆ ಈಗಾಗಲೇ 67 ಜೋಡಿಗಳ ನೋಂದಣಿ ಮಾಡಿಕೊಂಡಿದ್ದರು. ಆದರೆ ಈಗ ಎರಡು ಬಾರಿ ಮುಂದೂಡಿದ್ದಕ್ಕೆ ಬೇಸರಹೊಂದಿ ಸಾಲೂರು ಮಠದಲ್ಲಿ ಸ್ವಂತ ದುಡ್ಡಿನಲ್ಲಿ ಸೋಮವಾರ 7 ಜೋಡಿಗಳು ಮದುವೆಯಾಗಿದ್ದಾರೆ.
ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮ.ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ೨ ಬಾರಿ ವಿವಾಹ ಮುಂದೂಡಿಕೆಯಾಗಿದ್ದ ಹಿನ್ನಲೆ ಬೇಸತ್ತ ಚಾಮರಾಜನಗರದ ಜಗದೀಶ್ ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್ಕುಮಾರ್ – ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯಕುಮಾರ್ – ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ – ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ – ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್ — ಸೌಭಾಗ್ಯ ಹಾಗೂ ಚಾಮರಾಜನಗರದ ರವಿ – ಸೌಮ್ಯ ಜೋಡಿಗಳು ಸಾಲೂರು ಬೃಹನ್ಮಠದಲ್ಲಿ ವಿವಾಹವಾಗಿದ್ದಾರೆ.
ಪ್ರಾಧಿಕಾರದ ಕಾರ್ಯದರ್ಶಿ ಪ್ರತಿಕ್ರಿಯೆ:
ಇನ್ಮುಂದೆ ಪೋಸ್ಟ್ಪೋನ್ ಮಾಡಲ್ಲ, ಕೆಲವರ ದಾಖಲಾತಿ ಸರಿಪಡಿಸುವಿಕೆ ಹಾಗೈ ಉಸ್ತುವಾರಿ ಸಚಿವರ ಸಮಯಕ್ಕಾಗಿ ಕಾಯುತ್ತಿದ್ದೇವೆ, ಸೆ. 3 ಅಥವಾ 6ರಂದು ಸಚಿವರು ಬರುವುದಾಗಿ ಹೇಳಿದ್ದು, ಈ ಬಾರಿ ಸಾಮೂಹಿಕ ವಿವಾಹ ಖಂಡಿತ ನೆರವೇರುತ್ತೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಚಿವರ ಸಮಯಕ್ಕಾಗಿ ಸಾಮೂಹಿಕ ವಿವಾಹವನ್ನೇ ಪ್ರಾಧಿಕಾರ ಮುಂದೂಡಿಕೆ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು ಒಂದಲ್ಲ ಎರಡು ಬಾರಿ ಶುಭ ಕಾರ್ಯ ಮುಂದೂಡಿರುವುದು ವಿಪರ್ಯಾಸವಾಗಿದೆ.




























