2:06 PM Tuesday 10 - November 2026

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ದಲಿತ ಬಾಲಕ ಎದೆಗೆ ಕಲ್ಲಲ್ಲಿ ಹೊಡೆದು ಕೊಂದರು! | ಡಿಸಿಎಂ ತವರಿನಲ್ಲೇ ಅಮಾನವೀಯ ಘಟನೆ

simhadri
22/09/2026

ಮಧುಗಿರಿ (ತುಮಕೂರು): ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ, ಅಪ್ರಾಪ್ತ ವಯಸ್ಸಿನ ದಲಿತ ಬಾಲಕನೋರ್ವನನ್ನು ಕಲ್ಲಿನಿಂದ ಹೊಡೆದು ಹತ್ಯೆಗೈದಿರುವ ದಾರುಣ ಘಟನೆ  ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ನಡೆದಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸಿಂಹಾದ್ರಿ (17) ಕೊಲೆಯಾದ ಅಪ್ರಾಪ್ತ ಬಾಲಕ. ಈ ಸಂಬಂಧ ಕಸಾಪುರ ಗ್ರಾಮದ ಮಾರುತೇಶ (ಬಂಡೆ ಗುಂಡ) ಎಂಬಾತನ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಸಂಬಂಧಿಸಿದಂತೆ ಮೃತ ಸಿಂಹಾದ್ರಿಯ ತಾಯಿ ಅನ್ನಪೂರ್ಣ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ  ಗ್ರಾಮದ ಊರ ಮಾರಮ್ಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಾಯಕ ಮತ್ತು ಒಕ್ಕಲಿಗ ಸಮುದಾಯದ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಕುಣಿಯಲು ಹೋದ ಸಿಂಹಾದ್ರಿಗೆ ಆರೋಪಿ ಮಾರುತೇಶ, “ನೀನು ಕೀಳು ಜಾತಿಯವನು, ನಮ್ಮ ಗಣೇಶನ ಹತ್ತಿರ ಏಕೆ ಬಂದಿದ್ದೀಯಾ?” ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

“ನಾನು ಗಣೇಶನನ್ನು ನೋಡಲು ಬಂದಿದ್ದೇನೆ” ಎಂದು ಸಿಂಹಾದ್ರಿ ಹೇಳಿದಾಗ, ಆರೋಪಿ ವಿಕಾರವಾಗಿ ಬೈದು ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಸಿಂಹಾದ್ರಿಯ ಎದೆಯ ಭಾಗಕ್ಕೆ ತೀವ್ರವಾಗಿ ಗುದ್ದಿದ್ದಾನೆ ಎಂದು ತಿಳಿಸಲಾಗಿದೆ.

ತೀವ್ರ ಗಾಯಗೊಂಡು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದ ಸಿಂಹಾದ್ರಿಯನ್ನು ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕೀಳು ಜಾತಿಯವನೆಂಬ ಕಾರಣಕ್ಕಾಗಿಯೇ ತನ್ನ ಮಗನನ್ನು ಕೊಲೆ ಮಾಡಲಾಗಿದೆ. ಹೀಗಾಗಿ ಆರೋಪಿ ಮಾರುತೇಶ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಪ್ರಕಾರ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕು ಎಂದು ಅನ್ನಪೂರ್ಣ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಿಡಿಗೇಶಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version