ಮುಸ್ಲಿಂ ಯುವಕನ ಕೊಲೆ:  ಪೊಲೀಸ್ ಇಲಾಖೆ, ಸರಕಾರ ನೇರ ಹೊಣೆ: ಡಿವೈಎಫ್ ಐ - Mahanayaka
8:30 AM Wednesday 20 - August 2025

ಮುಸ್ಲಿಂ ಯುವಕನ ಕೊಲೆ:  ಪೊಲೀಸ್ ಇಲಾಖೆ, ಸರಕಾರ ನೇರ ಹೊಣೆ: ಡಿವೈಎಫ್ ಐ

bantwal
28/05/2025


Provided by

ಬಂಟ್ವಾಳ ತಾಲೂಕಿನ ಕೊಳ್ತಮಜಲಿನ ಮುಸ್ಲಿಂ ಸಮುದಾಯದ ಯುವಕನೊಬ್ಬನ ಹತ್ಯೆಯಿಂದ ಮತ್ತೆ ಜಿಲ್ಲೆಯ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ. ದ.ಕ. ಜಿಲ್ಲೆಯಲ್ಲಿ ಪದೇ ಪದೇ ನಡೆಯುವ ಇಂತಹದೇ ಮತೀಯ ಹಿಂಸಾಚಾರವು ಜನರ ನೆಮ್ಮದಿಯ ಜೀವನಕ್ಕೆ  ಮತ್ತೆ ಜಿಲ್ಲೆಯ ಆರ್ಥಿಕತೆಯ ಮೇಲೆ ಬಹುದೊಡ್ಡ ಹೊಡೆತ ನೀಡಿದೆ. ಬಿಜೆಪಿ ಸಂಘಪರಿವಾರದ ಮತೀಯ ಧ್ರುವೀಕರಣದ ರಾಜಕಾರಣ, ಕೋಮು ದ್ವೇಷಕಾರುವ, ಹಿಂಸಾಚಾರದ ಕರೆಗಳು ಪ್ರತೀಕಾರದ ಕೊಲೆಗಳಿಗೆ ಅವಕಾಶ ಮಾಡಿಕೊಟ್ಟಂತೆ ಕಾಣುತ್ತಿದೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಈ ಕೂಡಲೇ ಬಂಟ್ವಾಳದಲ್ಲಿ ಕೊಲೆಯಾದ ಮುಸ್ಲಿಂ ಸಮುದಾಯದ ಯುವಕನ ಹಂತಕರನ್ನು ಶೀಘ್ರಗತಿಯಲ್ಲಿ ಬಂಧಿಸಬೇಕು. ಕೊಲೆಯ ಹಿಂದಿರುವ ನೈಜಾಂಶವನ್ನು ಬಯಲುಗೊಳಿಸಬೇಕೆಂದು ಡಿವೈಎಫ್ ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ರಾಜಕಾರಣದಲ್ಲೇ ಹಿಡಿತ ಸಾಧಿಸುತ್ತ ಬಂದಿರುವ ಬಿಜೆಪಿ, ಸಂಘಪರಿವಾರದ ಹಿನ್ನಲೆಗಳನ್ನು ಅರಿತಿರುವ ಇಲ್ಲಿನ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಮತ್ತು ಈಗಿನ ಸರಕಾರ ಅವರ ಕಾನೂನು ವಿರೋಧಿ ಚಟುವಟಿಕೆಗಳನ್ನು, ದ್ವೇಷ ಹರಡುವ ಭಾಷಣಗಳನ್ನು ನಿಯಂತ್ರಿಸದೆ ಇರುವ ಕಾರಣಕ್ಕೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ದಾಳಿಗೆ ಮುಂದಾಗುವ, ಇಂತಹ ಪ್ರತೀಕಾರದ ಕೊಲೆಗಳಿಗೆ ಪ್ರಚೋದನೆಯನ್ನು ಒದಗಿಸಲು ಕಾರಣವಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ದಿದೆ ಇಲ್ಲಿನ ಪೊಲೀಸ್ ಇಲಾಖೆಯೊಳಗೆ ಅಮೂಲಾಗ್ರವಾದ ಬದಲಾವಣೆ ತರಬೇಕೆಂದು ಹಲವು ಬಾರಿ ಒತ್ತಾಯಿಸಿದರೂ ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಆಳುವ ಸರಕಾರಗಳು ಬೇಜವಾಬ್ದಾರಿಯನ್ನು ವಹಿಸಿದೆ. ಜಿಲ್ಲೆಯ ಉಸ್ತುವಾರಿ ಮಂತ್ರಿ ಕೇವಲ ಕಟ್ಟುನಿಟ್ಟಿನ ಕ್ರಮಕೈಗೊಳ್ಳಾಗುವುದೆಂಬ ಕೇವಲ ಹೇಳಿಕೆಗಳನ್ನಷ್ಟೇ ಹೊರಡಿಸುತ್ತಾರೆಯೇ ಹೊರತು ಇಲ್ಲಿ ಬಿಜೆಪಿ ಸಂಘಪಾರಿವಾರದ ಹಿಂಸಾಚಾರಕ್ಕೆ ಗುರಿಯಾಗುತ್ತಿರುವ ಅಮಾಯಕ ಮುಸ್ಲಿಂ ಸಮುದಾಯದ ರಕ್ಷಣೆಗೆ ಯಾವೊಂದು ಕ್ರಮಗಳು ಇಲ್ಲದೇ ಇರೋದು ಖೇದಕರ. ಮತ್ತದೇ ಸಂಜೆಯಾಗುತ್ತಲೇ ವ್ಯಾಪಾರ ನಡೆಸಿ ಬದುಕುವ ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಬಂದು ಮಾಡಿಸಿ ನಗರವನ್ನು ಮುಚ್ಚುವ, ಮನೆಯಿಂದ ಹೊರಬರೋದಕ್ಕೂ ಭೀತಿ ಹುಟ್ಟಿಸುವಂತಹ ಕ್ರಮಗಳಿಂದ ಯಾವುದೇ ಪ್ರಯೋಜನಗಳಿಲ್ಲ ಎಂದು ಡಿವೈಎಫ್ ಐ ಆಪಾದಿಸಿದೆ.

ಬಂಟ್ವಾಳದಲ್ಲಿ ಹತ್ಯೆಯಾಗಿರುವ ಮುಸ್ಲಿಂ ಸಮುದಾಯದ ಅಮಾಯಕ ಯುವಕನ ಹಂತಕರನ್ನು ಕೂಡಲೇ ಬಂಧಿಸಬೇಕು. ಕೊಲೆಗೆ ಪ್ರಚೋದನೆ ಕಾರಣದಾವರನ್ನೆಲ್ಲಾ ಬಯಲಿಗೆಳೆಯಬೇಕು. ಜಿಲ್ಲೆಯ ಯುವಜನತೆ ಶಾಂತಿಯನ್ನು ಕಾಪಾಡಬೇಕೆಂದು ಡಿವೈಎಫ್ ಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರು  ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ  ಸಂತೋಷ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ