ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯೂ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ! - Mahanayaka
4:41 AM Wednesday 17 - September 2025

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯೂ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ!

bappa nadu
08/04/2023

ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಪ್ರಸಿದ್ಧ 800 ವರ್ಷಗಳ ಇತಿಹಾಸ ಇರುವ ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಣಿಸಿಕೊಂಡಿರುವ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿರಾಕರಿಸಲಾಗಿದೆ.


Provided by

ಎಪ್ರಿಲ್ 5ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಈ ಮಧ್ಯೆ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ನಿರಾಕರಿಸಿ ವ್ಯಾಪಾರಿಗಳನ್ನು ಹಿಂದೆ ಕಳುಹಿಸಲಾಗಿದೆ.

ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಂದುತ್ವ ಸಂಘಟನೆಗೆ ಸೇರಿದವರೆನ್ನಲಾದ ಕೆಲವರು ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಅನುವಂಶಿಕ ಮೊಕ್ತೇಸರರಿಗೆ ಮನವಿಯೊಂದನ್ನು ಸಲ್ಲಿಸಿದ್ದರು ಎನ್ನಲಾಗಿದೆ. ಈ ಮನವಿಯಲ್ಲಿ “ಹಿಂದೂ ಧಾರ್ಮಿಕ ದತ್ತಿ ನಿಯಮ 2002ರಂತೆ ದೇವಸ್ಥಾನದ ಆವರಣದಲ್ಲಿ ಇತರ ಮತೀಯರು ವ್ಯಾಪಾರ ಮಾಡುವಂತಿಲ್ಲ.

ಇಲಾಖೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕುʼ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಈ ಮನವಿಯನ್ನು ಮುಂದಿಟ್ಟುಕೊಂಡು ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಣಿಸಿಕೊಂಡಿರುವ ಮತ್ತು ಮುಸಲ್ಮಾನರೇ ನಿರ್ಮಿಸಿರುವ ಬಪ್ಪನಾಡು ದೇವಸ್ಥಾನದ ಜಾತ್ರಾಮಹೊತ್ಸವದಲ್ಲಿ ಮುಸ್ಲಿಮರು ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಕಳೆದ 800 ವರ್ಷಗಳಿಂದಲೂ ಇಲ್ಲಿ ಹೆಚ್ಚಾಗಿ ಮುಸ್ಲಿಂ ವ್ಯಾಪಾರಿಗಳು ದೇವರಿಗೆ ಪ್ರಿಯವಾದ ಮಲ್ಲಿಗೆ ಹೂವು ಮಾರಾಟದ ಮಳಿಗೆ, ಮಕ್ಕಳ ಆಟಿಕೆಗಳ ಮಳಿಗೆಗಳನ್ನು ಇಡುತ್ತಿದ್ದರು. ಅದೂ 800ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಎರಡು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗ್ತಿದೆ.

ಸುಮಾರು 800 ವರ್ಷಗಳ ಹಿಂದೆ ಬಪ್ಪಬ್ಯಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಒಲಿದಿದ್ದರು. ಆ ಬಳಿಕ ದೇವಿಯ ಸೂಚನೆಯಂತೆ ಬಪ್ಪಬ್ಯಾರಿ ಮುಲ್ಕಿಯಲ್ಲಿ ದುರ್ಗಾಪರಮೇಶ್ವರಿ ಅಮ್ಮನವರಿಗೆ ದೇವಸ್ಥಾನವನ್ನು ನಿರ್ಮಿಸಿದರು ಎಂಬುದು ಮುಲ್ಕಿ ಬಪ್ಪನಾಡು ದೇವಸ್ಥಾನದ ಇತಿಹಾಸ ಹೇಳುತ್ತದೆ. ಅಲ್ಲದೆ, ಇದೇ ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಪ್ಪಬ್ಯಾರಿ ಅವರ ಕುಂಬಸ್ಥರಿಗೆ ಪ್ರಥಮವಾಗಿ ದೇವರ ಪ್ರಸಾದವನ್ನು ನೀಡಿದ ಬಳಿಕವೇ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ ನಡೆಯುವುದು ಇಲ್ಲಿನ ಪದ್ದತಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EOUjVqy3Mmp66N4bRSBoht

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ